

ನವದೆಹಲಿ: ಎಫ್ಡಿಐ ನೀತಿ ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ 1999 (ಎಫ್ಇಎಂಎ) ಉಲ್ಲಂಘಿಸಿದ ಆರೋಪ ಹಿನ್ನೆಲೆಯಲ್ಲಿ ಇ-ಕಾಮರ್ಸ್ ಕಂಪನಿಗಳಾದ ಅಮೆಜಾನ್ ಹಾಗೂ ಫ್ಲಿಪ್ಕಾರ್ಟ್ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಜಾರಿ ನಿರ್ದೇಶನಾಲಯ (ಇಡಿ) ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.
ಎಫ್ಡಿಐ ನೀತಿ ಮತ್ತು ಎಫ್ಇಎಂಎ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಈ ಕಂಪನಿಗಳ ವಿರುದ್ಧ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ವಿವಿಧ ದೂರುಗಳನ್ನು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಕೇಂದ್ರ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ. ಫ್ಲಿಪ್ಕಾರ್ಟ್ ಮತ್ತು ಆದಿತ್ಯ ಬಿರ್ಲಾ ಗ್ರೂಪ್ ನಡುವಿನ ಒಪ್ಪಂದದಲ್ಲಿ ಎಫ್ಡಿಐ ನೀತಿ ಉಲ್ಲಂಘನೆ, ಉತ್ಪಾದನೆಯಲ್ಲಿ ಎಫ್ಡಿಐಗೆ ಸಂಬಂಧಿಸಿದ ನೀತಿಯ ಉಲ್ಲಂಘನೆ ಸೇರಿ ಸಿಎಐಟಿಯು ನಾಲ್ಕು ದೂರುಗಳನ್ನು ಕೇಂದ್ರಕ್ಕೆ ಸಲ್ಲಿಸಿತ್ತು. ದೇಶಾದ್ಯಂತದ ಎಲ್ಲ ವ್ಯಾಪಾರಿಗಳು 2021 ವರ್ಷವನ್ನು ಭಾರತೀಯ ವ್ಯಾಪಾರ್ ಸಮ್ಮಾನ್ ವರ್ಷ ಎಂದು ಆಚರಿಸುತ್ತಾರೆ ಹಾಗೂ ಇ-ಕಾಮರ್ಸ್ ದೈತ್ಯ ಸಂಸ್ಥೆಗಳ ದಬ್ಬಾಳಿಕೆಯನ್ನು ಕೊನೆಗೊಳಿಸುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತದೆ ಎಂದು ಸಿಎಐಟಿ ಹೇಳಿದೆ. ಭಾರತೀಯ ವ್ಯಾಪಾರಿಗಳ ವ್ಯವಹಾರಗಳನ್ನು ವಿಸ್ತರಿಸಲು ಡಿಜಿಟಲ್ ಮಾರ್ಕೆಟ್ ಮತ್ತು ಪಾವತಿಯ ಹೊಸ ವಿಧಾನಗಳನ್ನು ಅಳವಡಿಕೊಳ್ಳಲು ಉತ್ತೇಜಿಸುವುದಾಗಿ ಸಿಎಐಟಿ ತಿಳಿಸಿದೆ.
ಗೂಗಲ್ ಪೇ ವಿರುದ್ಧ ದೂರು
ಗೂಗಲ್ನ ಆನ್ಲೈನ್ ಪಾವತಿ ವ್ಯವಸ್ಥೆಯಾದ ಜಿ ಪೇ, ಗ್ರಾಹಕರ ಆಧಾರ್ ಮತ್ತು ಬ್ಯಾಂಕಿಂಗ್ ಮಾಹಿತಿಗಳನ್ನು ಅನಧಿಕೃತವಾಗಿ ಸಂಗ್ರಹಿಸುತ್ತಿದೆ ಎಂದು ಆರೋಪಿಸಿ ದೆಹಲಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿದೆ. ಇದು ವಿವಿಧ ಕಾನೂನುಗಳ ಉಲ್ಲಂಘನೆ ಯಾಗಿದೆ ಎಂದು ಅರ್ಜಿದಾರ ಅಭಿಜಿತ್ ಮಿಶ್ರಾ ಹೇಳಿದ್ದಾರೆ. ಜಿ ಪೇ ವಿರುದ್ಧ ಅರ್ಜಿದಾರರು ಹಿಂದೆ ಸಲ್ಲಿಸಿದ್ದ ಅರ್ಜಿಗಳ ಸಹಿತ ಇತರ ಎಲ್ಲ ಪಿಐಎಲ್ಗಳ ಬಗ್ಗೆ ಒಂದು ಅಫಿಡವಿಟ್ ಸಲ್ಲಿಸುವಂತೆ ನ್ಯಾ. ವಿಭು ಬಖ್ರು ಮತ್ತು ಪ್ರತೀಕ್ ಜಲಾನ್ ಇದ್ದ ಪೀಠ ನಿರ್ದೇಶಿಸಿದೆ. ಜನವರಿ 14ಕ್ಕೆ ವಿಚಾರಣೆ ನಿಗದಿಪಡಿಸಲಾಗಿದೆ.