

ಲಖನೌ: ಯಾರು ಉದ್ದೇಶಪೂರ್ವಕವಾಗಿಯೇ ಕರೋನಾ ವೈರಸ್ ಹಬ್ಬಿಸುವ ಕೆಲಸ ಮಾಡುತ್ತಿದ್ದಾರೋ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯ ನಾಥ್ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಖಡಕ್ ಸಚನೆ ನೀಡಿದ್ದಾರೆ.
ಅಷ್ಟೇ ಅಲ್ಲ, ಯಾವುದಾದರೂ ಜಿಲ್ಲೆಯಲ್ಲಿ ಕರೊನಾ ಸೋಂಕಿತರು ಅಥವಾ ಶಂಕಿತ ಸೋಂಕಿತರು ಅಡಗಿದ್ದು ಕಂಡುಬಂದರೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ ಮತ್ತು ಎಸ್ಪಿ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರತಿ ಜಿಲ್ಲೆಗಳ ಎಲ್ಲ ಹಳ್ಳಿಗಳನ್ನೂ ಪರಿಶೀಲನೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಒಂದೊಮ್ಮೆ ಯಾರಾದರೂ ಸೋಂಕಿತ ಬೇಕೆಂದೇ ಅಡಗಿ ಕುಳಿತು, ಬೇರೆಯವರಿಗೆ ಹರಡಲು ಪ್ರಯತ್ನ ಮಾಡುತ್ತಿದ್ದರೆ ಅವನ ವಿರುದ್ಧ ಮತ್ತು ಆಯಾ ಜಿಲ್ಲಾಧಿಕಾರಿ, ಎಸ್ಪಿ ವಿರುದ್ಧವೂ ಪ್ರಕರಣ ದಾಖಲಾಗುವುದು ಎಂದು ಗೃಹ ಇಲಾಖೆ ಮುಖ್ಯ ಕಾರ್ಯದರ್ಶಿ ಅವಿನಾಶ್ ಕುಮಾರ್ ಅಶ್ವಥಿ ತಿಳಿಸಿದ್ದಾರೆ. (ಏಜೆನ್ಸೀಸ್)