

ಮಂಗಳವಾರ ಸಂಜೆ ರಾಜ್ಯಸಭೆ ಚುನಾವಣೆ ಫಲಿತಾಂಶ ಪ್ರಕಟಣೆ ಬಳಿಕ ವಿಜಯೋತ್ಸವ ಸಂದರ್ಭದಲ್ಲಿ ಕಾಂಗ್ರೆಸ್ನ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ ಪರವಾದ ಘೋಷಣೆ ಕೂಗಿದ ಘಟನೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ಹುಟ್ಟುಹಾಕಿದೆ. ಬುಧವಾರ ವಿಧಾನಸಭೆ ಮತ್ತು ವಿಧಾನ ಪರಿಷತ್ ಕಲಾಪದಲ್ಲಿ ಪ್ರತಿಪಕ್ಷ ನಾಯಕರು ಈ ಬಗ್ಗೆ ದನಿಯೆತ್ತಿದ್ದು ರಾಷ್ಟ್ರದ್ರೋಹಿಗಳನ್ನು ಬಂಧಿಸುವಂತೆ ಬಲವಾಗಿ ಆಗ್ರಹಿಸಿದ್ದಾರೆ. ಆದರೆ, ಘಟನೆಯ ಬಗ್ಗೆ ತನಿಖೆ ನಡೆದು, ವರದಿ ಬರುವ ಮುನ್ನವೇ ಸರ್ಕಾರ ಆರೋಪಿಗಳಿಗೆ ಕ್ಲೀನ್ಚೀಟ್ ನೀಡಲು ಹೊರಟಿರುವುದು ವಿಪರ್ಯಾಸ. ‘ವಿಡಿಯೋ ಪರಿಶೀಲಿಸಲಾಗಿದ್ದು, ಆ ಬಗೆಯ ಘೋಷಣೆ ಕೂಗಿಲ್ಲ’ ಎಂದು ಸಚಿವರೊಬ್ಬರು ತನಿಖಾಧಿಕಾರಿಯಂತೆ ಮಾತನಾಡಿರುವುದು ಸಮಂಜಸವಲ್ಲ. ಇಂಥ ಅಹಿತಕರ ಘಟನೆ ವಿಧಾನಸೌಧವಷ್ಟೇ ಅಲ್ಲ; ಎಲ್ಲೂ ನಡೆಯಬಾರದು. ಹೀಗಿರುವಾಗ ಸರ್ಕಾರದಲ್ಲಿರುವವರೇ ಘಟನೆಯನ್ನು ಸಮರ್ಥಿಸಿಕೊಳ್ಳಲು ಸ್ಪರ್ಧೆಗೆ ಬಿದ್ದವರಂತೆ ಹೇಳಿಕೆ ನೀಡುತ್ತಿರುವುದು ತುಷ್ಟೀಕರಣ ರಾಜಕಾರಣಕ್ಕೆ ಸ್ಪಷ್ಟ ನಿದರ್ಶನ.
ಯಾವುದೇ ಪಕ್ಷದ ಸರ್ಕಾರವಿರಲಿ ಇಂಥ ಸಂದರ್ಭದಲ್ಲಿ ಅತ್ಯಂತ ಜವಾಬ್ದಾರಿಯುತವಾಗಿ, ಸಂವೇದನಾಶೀಲವಾಗಿ ನಡೆದುಕೊಳ್ಳಬೇಕು. ಏಕೆಂದರೆ, ಇದು ದೇಶದ ಸಮಗ್ರತೆ, ಏಕತೆಗೆ ಸಂಬಂಧಿಸಿದ ಪ್ರಶ್ನೆ. ಇಲ್ಲಿನ ಪ್ರಜೆಯಾಗಿ, ಸೌಲಭ್ಯಗಳನ್ನು ಬಳಸಿಕೊಂಡು ಬದುಕು ಕಟ್ಟಿಕೊಂಡಿರುವವರು ಶತ್ರುರಾಷ್ಟ್ರದ ಪರವಾಗಿ ಮಾತನಾಡುತ್ತಾರೆ, ಆ ರಾಷ್ಟ್ರಕ್ಕೆ ಜೈಕಾರ ಹಾಕುತ್ತಾರೆ ಎಂಬ ಘಟನೆಯೇ ತೀವ್ರ ಖಂಡನಾರ್ಹ. ಇಂಥ ರಾಷ್ಟ್ರವಿರೋಧಿ ಮಾನಸಿಕತೆಯನ್ನು, ಕೃತ್ಯವನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಬಾರದು. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಸಂಯಮದಿಂದ, ಎಚ್ಚರದಿಂದ ಪ್ರತಿಕ್ರಿಯಿಸಬೇಕೆ ಹೊರತು ಜನರ ಭಾವನೆಗಳಿಗೆ ಘಾಸಿಯಾಗುವಂಥ ಹೇಳಿಕೆಗಳನ್ನು ನೀಡಬಾರದು. ವಿಧಾನಸೌಧದಲ್ಲಿ ನಡೆದ ಘಟನೆಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸಂಘರ್ಷ ಎಂದು ಭಾವಿಸಬಾರದು ಮತ್ತು ರಾಜಕಾರಣಿಗಳು ಹಾಗೆ ಬಿಂಬಿಸಲೂ ಬಾರದು. ದೇಶಕ್ಕೆ ಸಂಬಂಧಿಸಿದ ವಿಷಯಗಳು ಬಂದಾಗ ಘನತೆ, ಗೌರವವನ್ನು ಕಾಪಾಡಿಕೊಂಡು ನ್ಯಾಯಯುತ ಮೌಲ್ಯಗಳನ್ನು ರಕ್ಷಿಸಬೇಕೆ ಹೊರತು, ಆರೋಪಿಗಳ ರಕ್ಷಣೆ ಮಾಡಕೂಡದು.
ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮದಲ್ಲಿ ಅನುಮತಿ ಪಡೆದಿಲ್ಲವೆಂಬ ತಾಂತ್ರಿಕ ಕಾರಣವನ್ನು ಮುಂದೊಡ್ಡಿ, ರಾತ್ರೋರಾತ್ರಿ ಹನುಮಧ್ವಜವನ್ನು ತೆರವುಗೊಳಿಸಲು ಉತ್ಸಾಹ ತೋರಿದ್ದ ಸರ್ಕಾರ ಇಂಥ ಗಂಭೀರ ವಿಷಯದಲ್ಲಿ ಸಿನಿಕವಾಗಿ ವರ್ತಿಸುತ್ತಿರುವುದು ಏಕೆ? ಜನರು ಮತ್ತು ಮಾಧ್ಯಮಗಳ ಸಮ್ಮುಖದಲ್ಲಿಯೇ ವಿಧಾನಸೌಧದ ಘಟನೆ ನಡೆದಿದ್ದರೂ, ‘ಸಾಕ್ಷ್ಯಗಳು ಬೇಕು’ ಎನ್ನುತ್ತಿರುವ ಸರ್ಕಾರ, ಈ ಮೂಲಕ ವಿನಾಕಾರಣ ಗೊಂದಲ ಸೃಷ್ಟಿಸುತ್ತಿದೆ ಮತ್ತು ಘಟನೆಯನ್ನು ರಾಜಕೀಯ ದೃಷ್ಟಿಕೋನದಿಂದ ನೋಡುತ್ತಿದೆ. ತಪು್ಪ ನಡೆದಿಲ್ಲ ಎಂದಾದರೆ ಅಳುಕು, ಭಯವೇಕೆ? ಘಟನೆಯ ಬಗ್ಗೆ ನಿಷ್ಪಕ್ಷಪಾತವಾದ ತನಿಖೆ ನಡೆಯಬೇಕು. ತನಿಖೆಯ ನಡೆಯುವ ಮುನ್ನವೇ ಯಾರನ್ನೋ ರಕ್ಷಿಸುವ ಅವಸರ ಬೇಡ.
ಇತ್ತೀಚಿನ ದಿನಗಳಲ್ಲಿ ಪಾಕ್ ಪರ ಘೋಷಣೆ ಕೂಗುವ, ಪಾಕ್ ಧ್ವಜ ಹಾರಾಡಿಸುವ ರಾಷ್ಟ್ರವಿರೋಧಿ ಕೃತ್ಯಗಳು ಹೆಚ್ಚುತ್ತಿರುವುದು ಕಳವಳಕಾರಿ. ಈ ಬಗೆಯ ಮಾನಸಿಕತೆಯೇ ದೇಶದ ಆಂತರಿಕ ಭದ್ರತೆಗೆ ಅಪಾಯಕಾರಿ. ಹಾಗಾಗಿ, ಈ ಬಗೆಯ ಎಲ್ಲ ಘಟನೆಗಳಿಗೆ ಪಾಠವಾಗುವಂತೆ, ಇಂಥ ಕೃತ್ಯಗಳು ಮರುಕಳಿಸದಂತೆ ಸರ್ಕಾರ ಕಠೋರ ಕ್ರಮ ಕೈಗೊಳ್ಳಬೇಕು.