ಬತ್ತಿಲ್ಲ ಪುಸ್ತಕ ಪ್ರೀತಿ: ಓದಿನ ಸಂಸ್ಕೃತಿಗೆ ಸೃಜನಶೀಲ ಮನಸುಗಳ ಮನ್ನಣೆ

ಬತ್ತಿಲ್ಲ ಪುಸ್ತಕ ಪ್ರೀತಿ: ಓದಿನ ಸಂಸ್ಕೃತಿಗೆ ಸೃಜನಶೀಲ ಮನಸುಗಳ ಮನ್ನಣೆ
Published on

| ಎಂ.ಎ. ಸುಬ್ರಹ್ಮಣ್ಯ, (ಲೇಖಕರು ಸಾಹಿತ್ಯ ಪ್ರಕಾಶನದ ಮುಖ್ಯಸ್ಥರು)

ಸಾಮಾಜಿಕ ಮಾಧ್ಯಮಗಳ ಅಬ್ಬರದಲ್ಲಿ ಓದಿನ ಸಂಸ್ಕೃತಿ ಮರೆಯಾಗುತ್ತಿದೆ ಎಂಬ ಕಳವಳದ ನಡುವೆಯೂ ಕನ್ನಡದ ಪುಸ್ತಕಗಳನ್ನು ಓದುಗರ ವಲಯ ತುಂಬ ಕಾತರದಿಂದ ಸ್ವಾಗತಿಸುತ್ತಿದೆ ಎಂಬುದು ವಾಸ್ತವ. ಸೃಜನಶೀಲ ಕೃತಿಗಳು ಮತ್ತು ವಿಷಯ ನಾವೀನ್ಯದ ಕೃತಿಗಳು ಮಾರುಕಟ್ಟೆಯಲ್ಲಿ ಬಿಸಿದೋಸೆಯಂತೆ ಖರ್ಚಾಗುತ್ತಿವೆ. ಪ್ರಕಾಶಕರು ಪ್ರತೀ ವರ್ಷ ಲೋಕಾರ್ಪಣೆ ಮಾಡುವ ಪುಸ್ತಕಗಳ ಸಂಖ್ಯೆ ಮತ್ತು ಮಾರಾಟ ಮಾಡುವ ಕೃತಿಗಳ ಸಂಖ್ಯೆ ಹೆಚ್ಚುತ್ತಿದೆ. ಕನ್ನಡ ಪುಸ್ತಕಗಳ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ ಎಂಬುದಂತೂ ಸ್ಪಷ್ಟ.

‘ಪುಸ್ತಕ ಪ್ರೀತಿ ಬತ್ತಿಹೋಗಿದೆಯಾ?’

ಪುಸ್ತಕ ಕ್ಷೇತ್ರದಲ್ಲಿರುವ ಎಲ್ಲರೂ ಇತ್ತೀಚೆಗೆ ಹೆಚ್ಚಾಗಿ ಎದುರಿಸುತ್ತಿರುವ ಪ್ರಶ್ನೆ ಇದು. ಹಾಗೆ ನೋಡಿದರೆ ನನ್ನ 55 ವರ್ಷಗಳ ಅನುಭವದಲ್ಲಿ ಆಗಿನಿಂದಲೂ ಕೇಳಿಬರುತ್ತಿರುವಂತಹ ಪ್ರಶ್ನೆಯೇ ಆಗಿದೆ ಇದು. ಸಿನಿಮಾ ಬಂದಮೇಲೆ ಓದುಗರು ಕಡಿಮೆಯಾಗಿದ್ದಾರೆಯೇ? ಟೀವಿ ಬಂದಮೇಲೆ ಪುಸ್ತಕ ಕೊಳ್ಳುಗರ ಸಂಖ್ಯೆ ಬಿದ್ದುಹೋಗಿದೆಯೇ? ಎಂಬ ಪ್ರಶ್ನೆಗಳು ಈಗೀಗ ಮೊಬೈಲ್ ಫೋನ್ ಗೀಳಿನಿಂದಾಗಿ ಹೆಚ್ಚಾಗಿವೆ. ಹೊಸಜನಾಂಗಕ್ಕೆ ‘ಗೂಗಲ್ ಗುರು’ ಸಿಕ್ಕನಂತರವಂತೂ ಈ ಪ್ರಶ್ನೆ ಮತ್ತೆ ಮತ್ತೆ ಎದುರಾಗಿದೆ. ಈ ಪ್ರಶ್ನೆಗೆ ಉತ್ತರ ಶೋಧವೂ ನನ್ನಂಥವರ ಪ್ರಯತ್ನವಾಗಬೇಕು. ಹೌದು, ಸಿನಿಮಾ ಬಂತೆಂದು ಯಾರೂ ಪುಸ್ತಕ ಬಿಡಲಿಲ್ಲ. ಪುಸ್ತಕ ಓದುವವರೂ ಸಿನಿಮಾ ನೋಡುವವರೂ ಬೇರೆಯೇ ಆಗಿದ್ದರು. ಒಬ್ಬರೇ ಆಗಿದ್ದ-ಆಗಿರುವ ಸಂಭವ ತುಂಬ ಕಡಿಮೆ. ಮನೆಮನೆಯಲ್ಲೂ ಟೀವಿ ಬಂತಲ್ಲ? ಆ ಮೊದಲು ಆ ಮನೆಯವರೆಲ್ಲ ಪುಸ್ತಕ ಓದುವ ಗೀಳಿನವರಾಗಿದ್ದರೇ ಎಂಬುದಕ್ಕೂ ಇಂಥದೇ ಉತ್ತರ. ಆದರೆ, ಈಚಿನ ದಶಕದಲ್ಲಿ ವ್ಯಾಪಿಸಿರುವ ಮೊಬೈಲ್ ಫೋನ್ ಗೀಳು ಬರೀ ಪುಸ್ತಕ ಓದುಗರ ಸಮಯ ಮಾತ್ರ ಕಬಳಿಸುತ್ತಿಲ್ಲ, ಬದಲಾಗಿ ಎಲ್ಲ ಹವ್ಯಾಸದವರ ಮತ್ತು ಎಲ್ಲ ವೃತ್ತಿಯವರ ಸಮಯವನ್ನೇ ಕಸಿಯುತ್ತಿರುವುದು ಪೂರ್ತಿ ಸುಳ್ಳಲ್ಲ.

ಓದುಗರ ಸಂಖ್ಯೆ ಹೆಚ್ಚುತ್ತಿದೆ

ಏನೆಲ್ಲ ಪಲ್ಲಟಗಳ ಮಧ್ಯೆಯೂ ಓದಬೇಕಾದವರು ಓದುತ್ತಿಲ್ಲ, ಓದಿಸಬೇಕಾದವರು ಓದುವಂತೆ ಮಾಡುತ್ತಿಲ್ಲ ಎಂಬ ಕೊರಗಿನ ಮಧ್ಯೆಯೂ ಕನ್ನಡದ ಕ್ಲಾಸಿಕ್ ಕೃತಿಗಳ ಮಾರಾಟ ಮತ್ತು ಓದುಗರ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರಕಾಶಕರು, ಮಾರಾಟಗಾರರು ತಾವೂ ಓದಿ, ಓದುಗರಿಗೆ ಓದುವಂತೆ ಪ್ರೇರೇಪಿಸಬೇಕು. ಏಕೆಂದರೆ, ಸದ್ಯದ ಕಾಲಘಟ್ಟದಲ್ಲಿ ಆ ಬಗೆಯ ಪಾಲಕರ ಮತ್ತು ಶಿಕ್ಷಕರ ಕೊರತೆ ಎದ್ದುಕಾಣುತ್ತಿದೆ. ಇನ್ನು ಸರ್ಕಾರದ ಧೋರಣೆಯ ಬಗೆಗಂತೂ ಮಾತಾಡಿದರೂ ಪ್ರಯೋಜನವಿರದು. ಕನ್ನಡದ 50 ಶ್ರೇಷ್ಠ ಪುಸ್ತಕಗಳ ಪಟ್ಟಿ ಮಾಡಿಕೊಂಡು ಕನ್ನಡ ಬಲ್ಲವರೆಲ್ಲರಿಗೂ ‘ಇವುಗಳನ್ನಾದರೂ ಓದಿ, ಇಲ್ಲದಿದ್ದರೆ ನಿಮಗೆ ಓದಲು ಬಂದರೂ ವ್ಯರ್ಥ ಮಾತ್ರವಲ್ಲ; ಜನ್ಮವೇ ವ್ಯರ್ಥವೆನಿಸೀತು!’- ಎಂಬ ಎಚ್ಚರಿಕೆಯೊಂದಿಗೆ ತಲುಪಿಸಬೇಕು. ಪುಸ್ತಕ ಪ್ರೀತಿಯ ಒರತೆ ಬತ್ತದಂತೆ ನೋಡಿಕೊಳ್ಳಬೇಕು!

ಅಭಿರುಚಿ ಬದಲಾಗಿದೆ

ಓದುಗನ ಅಥವಾ ಪುಸ್ತಕ ಉಪಯೋಗಿಸುವವನ ಅಭಿರುಚಿಗಳು ನಿರಂತರ ಬದಲಾವಣೆಗೊಳಪಟ್ಟಿದ್ದೇ. ಓದುಗ ಬೇರೆ ಅಂತೆಯೇ ಪುಸ್ತಕ ಉಪಯೋಗಿಸುವವ ಬೇರೆ. ಓದುಗನಾದವನು ಮತ್ತೆಮತ್ತೆ ಓದಬೇಕೆನ್ನುವ ಹಸಿವೆಯುಳ್ಳವನು. ಪುಸ್ತಕ ಉಪಯೋಗಿಸುವವನ ಬಳಕೆ ತುಂಬ ಸೀಮಿತವಾದುದು. ಪುಸ್ತಕ ಪ್ರೀತಿ ಕಡಿಮೆಯಾಗುತ್ತಿದೆಯಾ ಎಂಬ ಪ್ರಶ್ನೆಗೆ ಯಾವ ರೀತಿಯ ಪುಸ್ತಕ ಪ್ರೀತಿ- ಎಂಬುದೇ ಉತ್ತರವಾದೀತು. ಅಡುಗೆ ವಿಧಾನ, ರಂಗೋಲಿ, ಬ್ಯೂಟಿಕೇರ್, ಯೋಗ-ವ್ಯಾಯಾಮ, ಭವಿಷ್ಯ-ಜಾತಕ, ರೋಡ್​ವ್ಯಾಪ್- ಡಿಸ್ಟನ್ಸ್ ಗೈಡ್- ಟೂರಿಸ್ಟ್ ಗೈಡ್ - ಡಿಕ್ಶನರಿ- ಮುಂತಾದವುಗಳಿಗೆ ಪರ್ಯಾಯವಾಗಿ ಸುಲಭದ ‘ಗೂಗಲ್ ಗುರು’ ಸಿಕ್ಕಿದ್ದಾನೆ. ಯಾಕೆ ಪುಸ್ತಕದಲ್ಲಿ ಹುಡುಕುತ್ತ ಸಮಯ ವ್ಯರ್ಥ ಮಾಡಬೇಕು? ನನ್ನ ಪ್ರಕಾಶಕ ಮಿತ್ರರೊಬ್ಬರು ಹೇಳುತ್ತಿದ್ದರು: ಪ್ರತಿ ವರ್ಷವೂ ನಾವು ಈ ಡಿಕ್ಶನರಿಯ ಒಂದು ಲಕ್ಷಕ್ಕಿಂತ ಹೆಚ್ಚು ಪ್ರತಿಗಳನ್ನು ಮುದ್ರಿಸುತ್ತಿದ್ದೆವು. ಈಗ ನಾವು ಹತ್ತು ಸಾವಿರ ಮಾರುವುದೂ ಕಷ್ಟವಾಗುತ್ತಿದೆ, ಎಂದು.

ಇನ್ನೋರ್ವ ಪ್ರಕಾಶಕ ಮಿತ್ರ ಹೇಳಿದ: ವರ್ಷಕ್ಕೆ 50000 ಪ್ರತಿಗಳಂತೆ ಸತ್ಯನಾರಾಯಣ ಪೂಜೆ, ಗಣಪತಿ ಪೂಜೆ, ಲಲಿತಾ ಸಹಸ್ರನಾಮ ಇತ್ಯಾದಿ ಪುಸ್ತಕಗಳನ್ನು ಪ್ರಕಟಿಸುತ್ತಿದ್ದೆವು. ಈಗದರ ಸಂಖ್ಯೆ 2000 ದಾಟುತ್ತಿಲ್ಲ, ಎಂದು. ಹೌದು, ಇಂತಹ ಪುಸ್ತಕಗಳನ್ನು ಉಪಯೋಗಿಸುವವರಿಗೆ ಬೇಕಾಗಿದ್ದ ಗೈಡ್ ಅಂತರ್ಜಾಲದಲ್ಲಿ ಸುಲಭವಾಗಿ ಸಿಕ್ಕಿಬಿಟ್ಟಿದ್ದಾನೆ. ಸತ್ಯನಾರಾಯಣ-ಗಣಪತಿ ಪೂಜೆಗೆ ಪುರೋಹಿತರನ್ನೋ ಪುಸ್ತಕವನ್ನೋ ಅವಲಂಬಿಸುವುದಕ್ಕಿಂತ ಯೂಟ್ಯೂಬ್ ಸುಲಭವಲ್ಲವೇ? ಓದುವ ಹವ್ಯಾಸವುಳ್ಳವ ಬೇರೆ. ಪುಸ್ತಕವನ್ನು ಗೈಡ್ ರೀತಿ ಬಳಸಿಕೊಳ್ಳುವವನು ಬೇರೆ. ಈ ಗೈಡ್ ಅಥವಾ ಈಟ ಜಿಠಿ ಢಟ್ಠ್ಟಛ್ಝಿ್ಛ ರೀತಿಯ ಪುಸ್ತಕಗಳ ಮಾರಾಟ ದೊಡ್ಡ ಪ್ರಮಾಣದಲ್ಲಿ ಕ್ಷೀಣಿಸಿದೆ. ಅಂತಹ ಪುಸ್ತಕಗಳ ಪ್ರೇಮಿಗಳಿಗೆ ಇನ್ನೂ ಸುಲಭದ ಪ್ರೇಮಿ ಮೊಬೈಲ್ ಫೋನ್​ನಲ್ಲಿ ಸಿಕ್ಕಿದ್ದಾನೆ. ಹಾಗೆಂದು ತಂತ್ರಜ್ಞಾನ ಬೆಳೆಯಲೇಬಾರದೇ? ತಮಾಷೆಯೆಂದರೆ, ಈ ಬಗೆಯ ಪುಸ್ತಕ ಬಳಕೆದಾರರ ಕುರಿತು ಯಾರಿಗೂ ತಕರಾರಿಲ್ಲ. ಈ ಪ್ರಕಾಶಕರು ಕೂಡ ಸ್ವಾಭಿಮಾನಿಗಳೇ ಆದವರು. ಎಂದೂ ತಮಗೆ ತೊಂದರೆ ಆಗಿಬಿಟ್ಟಿದೆ ಎಂದಾಗಲೀ ಸಹಾಯ ಬೇಕೆಂದಾಗಲೀ ಯಾರಲ್ಲೂ ಬೇಡಿಕೊಂಡವರಲ್ಲ. ಬದಲಾಗಿ, ತಮ್ಮ ವೃತ್ತಿಯಲ್ಲೇ ಅಲ್ಪಸ್ವಲ್ಪ ಬದಲಾವಣೆ ತಂದುಕೊಂಡು ಎಂದಿನಂತೆ ತಮ್ಮ ಜೀವನರಥ ಸಾಗಿಸತೊಡಗಿದ್ದಾರೆ.

ಪುಸ್ತಕ ವ್ಯವಸಾಯದ ಸುತ್ತ

ಕನ್ನಡ ಪುಸ್ತಕ ವ್ಯವಸಾಯದ ಇತಿಹಾಸವನ್ನೊಮ್ಮೆ ಅವಲೋಕಿಸಿದರೆ, ನಮಗೆ ಕಾಣಬರುವುದು ಅದು ಆರಂಭಗೊಂಡಿದ್ದೇ ಈ ಪುಸ್ತಕ ಗೀಳಿನ ಸುಸಂಸ್ಕೃತರಿಂದ. ನಮ್ಮ ಆರಂಭಕಾಲದ ಪ್ರಕಾಶಕ, ಲೇಖಕ ಗಳಗನಾಥರ ಅಭಿರುಚಿ ತುಂಬ ಶ್ರೇಷ್ಠಮಟ್ಟದ್ದೂ ರಾಷ್ಟ್ರಭಕ್ತಿಯನ್ನು ಉದ್ದೀಪಿಸುವಂತೆಯೂ ಆದುದಾಗಿತ್ತು. ಅವರೇ ಸ್ವತಃ ಬರೆದು, ಮುದ್ರಿಸಿ, ತಲೆಮೇಲೆ ಹೊತ್ತೊಯ್ಯುವ ಮಾರಾಟಗಾರರೂ ಆಗಿದ್ದರು. ನಂತರದ ಪೀಳಿಗೆಯ ಕುವೆಂಪು, ಮಾಸ್ತಿ, ಕಾರಂತ, ರಾಜರತ್ನಂ ಮುಂತಾದವರು ತಮ್ಮ ಕೃತಿಗಳನ್ನು ತಾವೇ ಪ್ರಕಟಿಸಿ ವಿತರಿಸುತ್ತಿದ್ದರು. ಅವರಿಗೆ ಓದುಗರ ಅಭಿರುಚಿ ತಿದ್ದಿ ಬೆಳೆಸುವ ಶಕ್ತಿ ಅವರ ಪಾಂಡಿತ್ಯವೇ ಒದಗಿಸಿಕೊಟ್ಟಿತ್ತು. ಡಿವಿಜಿ, ಬೇಂದ್ರೆ, ದೇವುಡು, ಬಿಎಂಶ್ರೀ, ತೀನಂಶ್ರೀ ಮುಂತಾಗಿ ಆ ಕಾಲದ ಬಹುತೇಕ ಸಾಹಿತಿಗಳೆಲ್ಲರೂ ಬಹುಭಾಷಾ ವಿಶಾರದರೂ ಆಗಿದ್ದುದರಿಂದ ಅವರಿಗೆ ಕನ್ನಡದ ಓದುಗರಿಗೆ ಅದೆಂತಹ ಸಾಹಿತ್ಯ ಬೇಕು, ಅವರ ಅಭಿರುಚಿಯನ್ನು ಉದಾತ್ತಗೊಳಿಸಬೇಕು- ಎಂಬಂತಹ ಸ್ಪಷ್ಟ ಜ್ಞಾನವೂ ಇತ್ತು. ನಂತರದ ಸಾಹಿತ್ಯದ ಬೆಳವಣಿಗೆಗಳು ಸ್ವಾತಂತ್ರ್ಯ ಸಂದರ್ಭದ ಆದರ್ಶಗಳನ್ನಿಟ್ಟುಕೊಂಡು ರಚನೆಗೊಂಡ ಅನಕೃ, ತರಾಸು, ಪುರಾಣಿಕ, ಕಟ್ಟೀಮನಿ, ರಾವಬಹಾದ್ದೂರ್, ನಿರಂಜನ ಮುಂತಾದ ಬಹಳಷ್ಟು ಲೇಖಕರ ಸಮೃದ್ಧ ಸಾಹಿತ್ಯದ ಕಾಲವೇ.

ಅಡಿಗ, ಗೋಕಾಕರಂತಹ ನವ್ಯ ಪ್ರಭೃತಿಗಳಿಂದ ಆರಂಭಗೊಂಡ ಸಾಹಿತ್ಯದ ಗಾಳಿ ಜೋರಾಗಿಯೇ ಬೀಸಿ ಹೊಸ ತಲೆಮಾರನ್ನು ಪುಸ್ತಕ ಓದಿನತ್ತ ಚುಂಬಕದಂತೆ ಸೆಳೆದಿತ್ತು. ಅದಕ್ಕೆ ಸಮಾನಾಂತರವಾಗಿ ತ್ರಿವೇಣಿ, ವಾಣಿ, ಎಂ.ಕೆ ಇಂದಿರಾ, ಆರ್ಯಾಂಬಾ ಪಟ್ಟಾಭಿ, ಉಷಾ ನವರತ್ನರಾಮ್ ಸಾಯಿಸುತೆ, ಕಾಕೋಳು ಸರೋಜ ಮುಂತಾದ ಕಾದಂಬರಿಗಾರ್ತಿಯರ ಮೃಷ್ಟಾನ್ನ ಆಹಾರ ಕನ್ನಡ ಕುಟುಂಬಗಳಿಗೆ ದಕ್ಕುತ್ತಿತ್ತು. ಬಂಡಾಯ ದಲಿತ ಚಳವಳಿಗಳ ಕಾಲದಲ್ಲಿ ಓದು-ಬರಹಗಳಿಗಿಂತ ಹೆಚ್ಚಾಗಿ ಬೇರೆಯೇ ಹಾದಿ ಹಿಡಿದಂತಿತ್ತು. ಸದ್ಯದ ಕನ್ನಡ ಸಾಹಿತ್ಯದಲ್ಲಿ ಯಾವ ಸಾಹಿತ್ಯ ಚಳವಳಿಯೂ ಕಂಡುಬರುತ್ತಿಲ್ಲವೆನಿಸುತ್ತಿರುವುದೂ ಒಳ್ಳೆಯದೇ ಎನಿಸುತ್ತಿದೆ. ಪ್ರಬಂಧ ಸಾಹಿತ್ಯದ ಓದಿನತ್ತ ಜನರ ಆಕರ್ಷಣೆ ಹೆಚ್ಚೆನಿಸುತ್ತಿದ್ದರೂ ವಸುಧೇಂದ್ರ, ಜೋಗಿ, ಗಣೇಶಯ್ಯ, ಗಜಾನನ ಶರ್ಮ ಮೊದಲಾದವರ ಓದುಗರು ಹೆಚ್ಚೇ ಇದ್ದಾರೆ.

ಆಸಕ್ತಿ ಮೂಡಿಸಬೇಕು

ಸಾಮಾನ್ಯವಾಗಿ ಪುಸ್ತಕ ಓದಿನ ಹವ್ಯಾಸ, ಅಭಿರುಚಿ ಎಂಬ ವಿಷಯದತ್ತ ಗಮನಹರಿಸುವಾಗ ನಮಗೆ ಥಟ್ಟನೇ ನೆನಪಾಗುವುದು ಅಜ್ಜ-ಅಜ್ಜಿ, ಅಪ್ಪ-ಅಮ್ಮ ಹೇಳುತ್ತಿದ್ದ ಕಥೆಗಳು. ಅವು ಪಂಚತಂತ್ರ, ಹಿತೋಪದೇಶ, ಉಪನಿಷತ್ತು-ಪುರಾಣ, ತೆನಾಲಿರಾಮ, ಅಕ್ಬರ್-ಬೀರಬಲ್ ಮುಂತಾದವುಗಳಾಗಿದ್ದವು. ಆ ಕಾಲದ ಅಜ್ಜ-ಅಜ್ಜಿಯರು ಈಗ ಅಪರೂಪವಾಗುತ್ತಿದ್ದಾರೆ. ಅಪ್ಪ- ಅಮ್ಮಂದಿರೇ ಆ ಹೊಣೆಯನ್ನೂ ನಿಭಾಯಿಸಬೇಕಾಗಿದೆ. ಬಾಲ್ಯದಲ್ಲಿಯೇ ಕುತೂಹಲ, ಆಸಕ್ತಿಗಳನ್ನು ಬೆಳೆಸುವ ಜವಾಬ್ದಾರಿ ಈಗಿನ ತಂದೆ- ತಾಯಂದಿರೇ ಹೊರಬೇಕಾಗಿದೆ. ತಮ್ಮೆಲ್ಲ ಕೆಲಸಗಳ ಮಧ್ಯೆಯೂ ಅವರು ತಮ್ಮ ಮಕ್ಕಳ ಬಾಲ್ಯದ ಪೋಷಣೆಗಾಗಿ ಸಮಯವನ್ನು ಮೀಸಲಿಡಲೇಬೇಕು. ಹಾಗೆ ಮಾಡುತ್ತಿರುವವರ ಸಂಖ್ಯೆ ಕಡಿಮೆಯಿರಬಹುದು, ಆದರೆ ಗಣನೀಯವಾಗಿಯೇ ಇದೆ. ಅಂಥ ಮಕ್ಕಳೇ ಮುಂದೆ ಓದನ್ನೊಂದು ಗೀಳನ್ನಾಗಿಸಿಕೊಳ್ಳುತ್ತಾರೆ. ಈ ಬಗೆಯ ಪುಸ್ತಕಗಳ ಪ್ರಕಾಶಕರ ಸಂಖ್ಯೆ ಈಗಲೂ ಕನ್ನಡದಲ್ಲಿ ಗಣನೀಯ ಸಂಖ್ಯೆಯಲ್ಲೇ ಇರುವರೆಂಬುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net