ಮಾಜಿ ಪ್ರಿಯಕರನಿಂದ ಆ್ಯಸಿಡ್ ದಾಳಿ ಬೆದರಿಕೆ

Crime Logo
Published on

ಬೆಂಗಳೂರು: ಮಾಜಿ ಪ್ರಿಯಕರ ಆ್ಯಸಿಡ್ ದಾಳಿ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ.
೨೨ ವರ್ಷದ ಮಹಿಳೆ ನೀಡಿರುವ ದೂರಿನನ್ವಯ ಕುಮಾರಸ್ವಾಮಿ(೨೩) ಎಂಬಾತನ ವಿರುದ್ಧ ಚಂದ್ರಾಲೇಔಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಮಹಿಳೆಯ ಆರೋಪವೇನು?
ತನಗೆ ಪರಿಚವಿದ್ದ ಕುಮಾರಸ್ವಾಮಿ ತನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಆದರೆ ನಾನು ಸುಮಂತ್ ಎಂಬಾತನನ್ನು ೨-೩ ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದೆ. ಆದರೂ ಸಹ ತಾನು ಕೆಲಸಕ್ಕೆ ಹೋಗುವಾಗ ಕುಮಾರಸ್ವಾಮಿ ಬಂದು ಅಡ್ಡಗಟ್ಟಿ ತನ್ನನ್ನು ಪ್ರೀತಿಸುವಂತೆ ಇಲ್ಲದಿದ್ದರೆ ಆ್ಯಸಿಡ್ ದಾಳಿ ಮಾಡುವುದಾಗಿ ಪೀಡಿಸುತ್ತಿದ್ದ. ಫೆ. ೩ರಂದು ಚಂದ್ರಲೇಔಟ್‌ನಲ್ಲಿರುವ ತನ್ನ ಮನೆಗೆ ಬಂದಿದ್ದ ಆರೋಪಿ ‘ನಿನಗೆ ನಾನೆ ಗತೀ, ನನ್ನ ಜೊತೆ ಬಾ’ ಎಂದು ನನ್ನ ಮೈ ಕೈ ಮುಟ್ಟಿ ಎಳೆದಾಡಿದ್ದಾನೆ. ಆ ಸಂದರ್ಭದಲ್ಲಿ ನಮ್ಮ ತಾಯಿ ಬಂದಿದ್ದು, ಆಗ ಆತ ’ಇವತ್ತು ನೀನು ಮಿಸ್ ಆಗಿದ್ದೀಯಾ, ನಿನ್ನ ಮೇಲೆ ಆ್ಯಸಿಡ್ ಹಾಕುತ್ತೇನೆ ಎಂದು ಆರೋಪಿ ಬೆದರಿಸಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದು, ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದಾನೆ ಎನ್ನಲಾಗಿದೆ.

ಕುಮಾರಸ್ವಾಮಿಯ ಆರೋಪವೇನು?
ಟಾಟಾ ಏಸ್ ವಾಹನ ಓಡಿಸಿಕೊಂಡು ಜೀವನ ನಿರ್ವಹಿಸುತ್ತಿದ್ದ ಕುಮಾರಸ್ವಾಮಿಗೆ ೨೦೨೦ರಲ್ಲಿ ದೂರುದಾರಳ ಪರಿಚಯವಾಗಿತ್ತು. ಹೊಸಕೆರೆಹಳ್ಳಿ ತನ್ನ ಅಕ್ಕನ ಮನೆಗೆ ಬರುತ್ತಿದ್ದವಳೊಂದಿಗಿನ ಪರಿಚಯ ಪ್ರೇಮವಾಗಿತ್ತು. ಆದರೆ ನಂತರದ ದಿನಗಳಲ್ಲಿ ಮನಸ್ತಾಪ ಉಂಟಾಗಿದ್ದರಿಂದ ತಾನು ಅಂತರ ಕಾಡಿಕೊಂಡಿದ್ದೆ. ೨೦೨೩ರಲ್ಲಿ ಆಕೆಗೆ ಸುಮಂತ್ ಎಂಬಾತನ ಜತೆಗೆ ವಿವಾಹವಾಗಿತ್ತು. ಕೆಲಸದ ನಿಮಿತ್ತ ನನ್ನ ಮಾಜಿ ಪ್ರಿಯತಮೆಯ ಮನೆಯ ಬಳಿ ಹೋದಾಗ ಆಕೆಯ ಗಂಡ ಸುಮಂತ್ ಗುಂಪುಕಟ್ಟಿಕೊಂಡು ಬಂದು ತನ್ನ ಮೇಲೆ ಹಲ್ಲೆ ಮಾಡಿದ್ದ. ಜತೆಗೆ ಆತನ ಕಡೆಯವರು ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದರು. ಈ ಸಂಬಂಧ ಗಿರಿನಗರ ಠಾಣೆಗೆ ದೂರು ನೀಡಲಾಗಿತ್ತು. ಅದರನ್ವಯ ಸುಮಂತ್‌ನನ್ನು ಪೊಲೀಸರು ಬಂಧಿಸಿದ್ದರು ಎಂದು ಕುಮಾರಸ್ವಾಮಿ ಆರೋಪಿಸಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net