

ಬೆಂಗಳೂರು: ಮನೆಗೆ ಪೇಟಿಂಗ್ ಕೆಲಸಕ್ಕೆ ಬಂದು ಮಾಲೀಕರ ಕಣ್ಣು ತಪ್ಪಿಸಿ ಬೆಡ್ ರೂಮ್‌ನಲ್ಲಿ ಚಿನ್ನಾಭರಣ ದೋಚಿದ್ದವನನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಮೂಲದ ಉಮೇಶ್ ಪ್ರಸಾದ್ ಜಾಧವ್ (30) ಬಂಧಿತ. ಆರೋಪಿಯಿಂದ 6 ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಬಸವನಗುಡಿ ಸರ್ವೇಯರ್ ಸ್ಟ್ರೀಟ್ ನಿವಾಸಿ ಬಿ.ಕೆ. ಭಾಸ್ಕರ್ ಎಂಬುವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿವೃತ್ತ ಅಧಿಕಾರಿ ಭಾಸ್ಕರ್, ಮನೆಗೆ ಪೇಟಿಂಗ್ ಮಾಡಿಸಲು ಜಾಧವ್‌ನನ್ನು ಕರೆಸಿದ್ದರು. ಮನೆ ಒಳಭಾಗದಲ್ಲಿ ಪೇಟಿಂಗ್ ಕೆಲಸ ಮಾಡುತ್ತಿದ್ದಾಗ ಮಾಲೀಕರ ಕಣ್ಣು ತಪ್ಪಿಸಿ ಬೆಡ್ ರೂಮ್‌ನಲ್ಲಿದ್ದ ಕಬೋರ್ಡ್ ತೆರೆದು ಚಿನ್ನಾಭರಣ ಕದ್ದು ಉತ್ತರ ಪ್ರದೇಶಕ್ಕೆ ಪರಾರಿಯಾಗಿದ್ದ. ಮನೆ ಮಾಲೀಕರು ಕಬೋರ್ಡ್ ನೋಡಿದಾಗ ಚಿನ್ನಾಭರಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು.
ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕೆಲ ದಿನಗಳ ನಂತರ ಮತ್ತೆ ಬೆಂಗಳೂರಿಗೆ ಬಂದಿದ್ದ. ಅಷ್ಟರಲ್ಲಿ ಆರೋಪಿಯ ಬಂಧನಕ್ಕಾಗಿ ತನಿಖೆಗೆ ಇಳಿದಿದ್ದ ಪೊಲೀಸರು, ಆರೋಪಿಯ ಜಾಡು ಹಿಡಿದು ಬಂಧಿಸಿದ್ದಾರೆ. ಚಿನ್ನಾಭರಣ ಕದ್ದಿದ್ದು ನಾನೇ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.