

ಬೆಂಗಳೂರು: ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗೆ ಜಾಮೀನು ನೀಡಲು ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ₹50 ಲಕ್ಷ ಲಂಚ ನಿರೀಕ್ಷಿಸುತ್ತಿದ್ದಾರೆ ಎಂದು ಆರೋಪಿಯ ತಾಯಿಗೆ ಹೇಳಿದ ಆರೋಪದಲ್ಲಿ ವಕೀಲೆ ಬಿ.ಎಂ. ದಯೀನಾ ಬಾನು ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಜಾಮೀನು ಮಂಜೂರು ಮಾಡಲು ನ್ಯಾಯಮೂರ್ತಿಗಳು 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ ಎಂದು ವಕೀಲೆ ದಯೀನಾ ಅವರು ಕೊಲೆ ಆರೋಪಿ ವಿಷ್ಣು ಅಲಿಯಾಸ್ ವಿಷ್ಣುದೇವನ್ ತಾಯಿ ತೆರೇಸಾ ಅವರಿಗೆ ಹೇಳಿದ್ದರು ಎಂದು ಹೇಳಲಾಗಿದೆ.
ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಕೋರಿ ತೆರೇಸಾ ಅವರು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ದೂರು ನೀಡಿದ್ದರು. ಜಾಮೀನು ಕೋರಿರುವ ಅರ್ಜಿಯ ದಾಖಲೆ ಪಡೆದು ದಯೀನಾ ಬಾನು ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ನ್ಯಾಯಮೂರ್ತಿಗಳು ಆದೇಶಿಸಿದ್ದರು. ಇದರ ಬೆನ್ನಿಗೇ ದಯೀನಾ ಬಾನು ವಿರುದ್ಧ ಮುಂದಿನ ಕ್ರಮಕ್ಕಾಗಿ ಹೈಕೋರ್ಟ್‌ನ ಕಾನೂನು ಘಟಕದ ಜಂಟಿ ರಿಜಿಸ್ಟ್ರಾರ್ ರಾಜೇಶ್ವರಿ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಎಫ್‌ಐಆರ್‌ನಲ್ಲಿ ಏನಿದೆ?
ತೆರೇಸಾ ಅವರ ಪುತ್ರ 24 ವರ್ಷದ ವಿಷ್ಣು ಕೊಲೆ ಆರೋಪದಲ್ಲಿ ಮೂರು ವರ್ಷಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆತನಿಗೆ ಜಾಮೀನು ದೊರಕಿಸಲು ವಕೀಲರಾದ ಮರೀನಾ ಫರ್ನಾಂಡೀಸ್ ₹10 ಲಕ್ಷ ಪಡೆದಿದ್ದರು. ಜಾಮೀನು ಸಿಗದೇ ಇದ್ದುದರಿಂದ ಮರೀನಾ ಫರ್ನಾಂಡೀಸ್ ಅವರು ₹9 ಲಕ್ಷಕ್ಕೆ ಮೂರು ಚೆಕ್‌ಗಳನ್ನು ನೀಡಿದ್ದಾರೆ.
ಆದರೆ, ಇದುವರೆಗೂ ಹಣ ಹಿಂದಿರುಗಿಸಿಲ್ಲ. ಮರೀನಾ ಫರ್ನಾಂಡೀಸ್ ಅವರು ಆರತಿ ಎಂಬಾಕೆಯನ್ನು ಪರಿಚಯಿಸಿದ್ದರು. ಆರತಿಯು ಹೈಕೋರ್ಟ್ ನ್ಯಾಯಮೂರ್ತಿಯ ಪರಿಚಯಿವಿದೆ ಎಂದು ಹೇಳಿಕೊಂಡು ₹72 ಸಾವಿರ ರೂ. ತನ್ನಿಂದ ಪಡೆದುಕೊಂಡಿದ್ದು, ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ದಯೀನಾಬಾನು ಅವರು ನ್ಯಾಯಮೂರ್ತಿ ₹50 ಲಕ್ಷ ನಿರೀಕ್ಷಿಸಿರುತ್ತಾರೆ. ಇಲ್ಲವಾದಲ್ಲಿ ಜಾಮೀನು ಪ್ರಕ್ರಿಯೆಯನ್ನು ಬೇರೆ ವಕೀಲರಲ್ಲಿ ಮಾಡಿಸಿಕೊಳ್ಳುವಂತೆ ಸೂಚಿಸಿರುತ್ತಾರೆ ಎಂದಿದ್ದರು. ಈ ಸಂಬಂಧ ತೆರೆಸಾ ಅವರು ಹೈಕೋರ್ಟ್‌ನ ಮೆಟ್ಟಿಲೇರಿದ್ದರು.