ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಆರೋಪ

Published on

ಕೊಳ್ಳೇಗಾಲ: ಮದುವೆ ಆಗುವುದಾಗಿ ನಂಬಿಸಿ, ಅತ್ಯಾಚಾರ ಎಸಗಿರುವ ಪ್ರಿಯಕರ ಹಾಗೂ ಮದುವೆಗೆ ಅಡ್ಡಿಯಾಗಿರುವ ಮೂವರ ವಿರುದ್ಧ ಯುವತಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಪಟ್ಟಣದ ಉಪ್ಪಾರಮೋಳೆ ಬಡಾವಣೆ ನಿವಾಸಿ ನಾಗೇಂದ್ರ ಪ್ರಮುಖ ಆರೋಪಿಯಾಗಿದ್ದು, ಆತನ ತಂದೆ ಮಹದೇವ ಹಾಗೂ ಸ್ನೇಹಿತರಾದ ನಟರಾಜು, ಕೆಂಪಣ್ಣ ಎಂಬುವವರ ವಿರುದ್ಧ ಗ್ರಾಮವೊಂದರ ನೊಂದ ಯುವತಿ ದೂರು ನೀಡಿದ್ದಾಳೆ.

ಕಳೆದ 2024 ಮಾರ್ಚ್‌ನಲ್ಲಿ ನಾಗೇಂದ್ರ ಮತ್ತು ಕುಟುಂಬದವರು ಯುವತಿ ಮನೆಗೆ ಮದುವೆಗೆ ಹೆಣ್ಣು ನಿಶ್ಚಯಿಸಿಕೊಳ್ಳಲು ಹೋಗಿದ್ದರು. ಆದರೆ, ಯುವತಿ ಮದುವೆಗೆ ನಿರಾಕರಿಸಿದ್ದರು. ನಂತರ ದಿನಗಳಲ್ಲಿ ಆರೋಪಿಯು ಯುವತಿಯ ಮೊಬೈಲ್ ನಂಬರ್ ತಿಳಿದುಕೊಂಡು ಯುವತಿಯ ಫೋನ್ ಸಂಪರ್ಕ ಸಾಧಿಸಿ, ಗೆಳೆತನ ಬೆಳೆಸಿಕೊಂಡು ಮದುವೆಯಾಗುವುದಾಗಿ ನಂಬಿಸಿ, 6 ತಿಂಗಳ ಕಾಲ ಅಲ್ಲಲ್ಲಿ ಸುತ್ತಾಡಿ ಕೊನೆಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಆದರೀಗ ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ವಿಚಾರವಾಗಿ ಆರೋಪಿಯ ತಂದೆ ಮಹದೇವ ಹಾಗೂ ಸ್ನೇಹಿತರಾದ ನಟರಾಜು, ಕೆಂಪರಾಜು ಅವರೂ ಮದುವೆಗೆ ಅಡ್ಡಿಯಾಗಿದ್ದಾರೆ. ಜತೆಗೆ ಬೇರೆ ಯುವತಿ ಜತೆ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದಾನೆ. ಹಾಗಾಗಿ, ಕಳೆದವಾರ ಪಟ್ಟಣ ಪೊಲೀಸ್ ಠಾಣೆಯಲ್ಲಿ ನೊಂದ ಯುವತಿ ದೂರು ದಾಖಲಿಸಿದ್ದು, ಪೊಲೀಸ್ ಅಧಿಕಾರಿಗಳು ಈ ಪ್ರಕರಣವನ್ನು ಚಾ.ನಗರದ ಪೂರ್ವ ಪೊಲೀಸ್ ಠಾಣೆಗೆ ವರ್ಗಾಹಿಸಿದ್ದು, ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net