

ಬೆಂಗಳೂರು: ಪತ್ನಿಯನ್ನು ಮನೆ ಮಹಡಿ ಮೇಲಿಂದ ತಳ್ಳಿ ಕೊಲೆ ಮಾಡಿದ ಆರೋಪದಲ್ಲಿ ಪತಿ ವಿರುದ್ಧದ ದೋಷಾರೋಪ ಪಟ್ಟಿ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ. ಆರ್‌ಎಂಸಿ ಯಾರ್ಡ್ ಠಾಣಾ ಪೊಲೀಸರು ದಾಖಲಿಸಿರುವ ದೋಷಾರೋಪಪಟ್ಟಿ ರದ್ದುಪಡಿಸುವಂತೆ ಕೋರಿ ಯಶವಂತಪುರ ನಿವಾಸಿ ದೇವೇಂದ್ರ ಭಾಟಿಯಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಪತ್ನಿ ಆಕಸ್ಮಿಕವಾಗಿ ಮಹಡಿಯಿಂದ ಜಾರಿ ಬಿದ್ದು ಸಾವಿನಪ್ಪಿದ್ದಾಳೆ. ಕೊಲೆ ಬಗ್ಗೆ ಊಹಿಸಿಕೊಳ್ಳಲು ಅಸಾಧ್ಯ. ಪುತ್ರನೂ ತಂದೆಯೊಂದಿಗೆ ಸೌಹಾರ್ದ ಸಂಬಂಧ ಹೊಂದಿರಲಿಲ್ಲ. ಹೀಗಾಗಿ ಸುಖಾಸುಮ್ಮನೆ ಅಪಾದನೆ ಮಾಡಿದ್ದಾರೆ. ಪೊಲೀಸ್ ಆಯುಕ್ತರು ಪ್ರಕರಣದ ತನಿಖಾ ಅಧಿಕಾರಿಯನ್ನು ಒಂದು ನ್ಯಾಯವ್ಯಾಪ್ತಿಯಿಂದ ಬೇರೊಂದು ನ್ಯಾಯವ್ಯಾಪ್ತಿಗೆ ವರ್ಗಾಯಿಸುವ ಅಧಿಕಾರ ಹೊಂದಿಲ್ಲ.
ಇದೆಲ್ಲವನ್ನೂ ಪರಿಗಣಿಸಿ ದೋಷಾರೋಪ ಪಟ್ಟಿ ರದ್ದುಪಡಿಸುವಂತೆ ಮನವಿ ಮಾಡಿದರು.
ದೂರುದಾರರ ಪರ ವಕೀಲರು ವಾದ ಮಂಡಿಸಿ, ಪ್ರಕರಣದ ತನಿಖೆ ವರ್ಗಾವಣೆ ಬಗ್ಗೆ ಪ್ರಶ್ನೆ ಎತ್ತಲು ವಿಳಂಬ ಪ್ರವೃತ್ತಿ ತೋರಿದ್ದಾರೆ. ತಂದೆ ವಿರುದ್ಧ ಕೇವಲ ಮಗ ಮಾತ್ರ ಅಪಾದನೆ ಮಾಡಿಲ್ಲ. ಮಗಳು ಕೂಡ ಸಾಕ್ಷ್ಯ ನುಡಿದಿರುವುದಾಗಿ ಹೇಳಿದರು. ಈ ನಿಟ್ಟಿನಲ್ಲಿ ಅರ್ಜಿ ತಿರಸ್ಕರಿಸುವಂತೆ ಕೋರಿದರು.
ವಾದ -ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ಮೇಲಿನ ಆರೋಪಗಳು ಮೇಲ್ನೋಟಕ್ಕೆ ಸತ್ಯ ಎಂದು ತಿಳಿದುಬರುತ್ತದೆ. ಏನೂ ವಿಚಾರವಿರದೆ ಮಕ್ಕಳು ಯಾಕೆ ತಂದೆ ವಿರುದ್ಧ ಈ ಪರಿ ಅಪಾದನೆ ಮಾಡುತ್ತಾರೆ? ಅಲ್ಲದೆ, ಪ್ರಕರಣ ಸಂಬಂಧ ಇದುವೆರಗೂ ವಾರಂಟ್ ಜಾರಿಗೊಳಿಸಲಾಗಿಲ್ಲ, ಹೀಗಿರುವಾಗ ಆರೋಪಿಗೆ ರಕ್ಷಣಾತ್ಮಕ ಛತ್ರಿ ನೀಡುವ ಪ್ರಮೇಯವಿಲ್ಲ. ಅರ್ಜಿಯಲ್ಲಿ ಉಲ್ಲೇಖಿಸಲಾಗಿರುವ ಎಲ್ಲ ಸಂಗತಿಗಳು ಆರೋಪಿಯ ಕಾಲ್ಪನಿಕ ಆಲೋಚನೆ ಬಿತ್ತರಿಸುತ್ತದೆಯೇ ಹೊರತು ಸತ್ಯಾಂಶ ಅಡಗಿಲ್ಲ ಎಂದಿರುವ ಹೈಕೋರ್ಟ್, ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಪ್ರಕರಣವೇನು?
2018ರಲ್ಲಿ ನಗರದ ಯಶವಂತಪುರ ನಿವಾಸಿ ದೇವೇಂದ್ರ ಭಾಟಿಯಾ ತನ್ನ ಪತ್ನಿಯನ್ನು ಮನೆಯ 16 ಮಹಡಿ ಮೇಲಿಂದ ತಳ್ಳಿ ಕೊಲೆ ಮಾಡಿರುವುದಾಗಿದೇವೇಂದ್ರ ಅವರ ಪುತ್ರನೇ ಪೊಲೀಸರಿಗೆ ದೂರು ನೀಡಿದ್ದ. ಈ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡ ಎಂ ಸಿ ಯಾರ್ಡ್ ಠಾಣಾ ಪೊಲೀಸರು
ಕೊಲೆ ಮತ್ತು ಕೌಟುಂಬಿಕ ದೌರ್ಜನ್ಯದಡಿ ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅದನ್ನು ರದ್ದುಪಡಿಸಲು ಕೋರಿ ಹೈಕೋರ್ಟ್ ಗೆ ದೇವೇಂದ್ರ ಅರ್ಜಿ ಸಲ್ಲಿಸಿದ್ದರು.