

ಬೆಂಗಳೂರು: ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಅಪರಿಚಿತ ಯುವತಿಯ ಮೃತದೇಹ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವೇಲ್ನಿಂದ ಯುವತಿಯ ಕುತ್ತಿಗೆ ಬಿಗಿದು ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಪೊಲೀಸರು ಅಪರಿಚಿತ ಯುವತಿಯ ಮೃತದೇಹ ಪತ್ತೆಯಾಗುತ್ತಿದ್ದಂತೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಇದೀಗ ಮರಣೋತ್ತರ ಪರಿಕ್ಷೆಯಿಂದ ಕುತ್ತಿಗೆ ಬೀಗಿದು ಹತ್ಯೆ ಮಾಡಿರುವುದು ಸ್ಪಷ್ಟವಾಗಿದೆ.
ಘಟನೆಯ ವಿವರ:
ಯಶವಂತಪುರ ರೈಲ್ವೆ ನಿಲ್ದಾಣದ ಬಳಿ ಡ್ರಮ್ ಒಳಗೆ ನಿನ್ನೆ(ಜ.05) ಯುವತಿಯ ಮೃತದೇಹ ಪತ್ತೆಯಾಗಿತ್ತು. ಡಿ.26ರಂದು ಪ್ಲಾಟ್ ಫಾರಂ 1ರ ಬಳಿ ಯುವತಿಯ ಮೃತದೇಹ ತುಂಬಿದ್ದ ಡ್ರಮ್ ತಂದಿಡಲಾಗಿತ್ತು. ವಿವಾಹಿತ ಮಹಿಳೆಯಾಗಿದ್ದು, ಮೃತದೇಹ ಪೂರ್ತಿ ಕೊಳೆತ ಸ್ಥಿತಿಯಲ್ಲಿತ್ತು ಪತ್ತೆಯಾಗಿತ್ತು. ಸಿಸಿಟಿವಿ ಡೈವರ್ಷನ್ ಆಗದಿರುವುದರಿಂದ ಡ್ರಮ್ನ್ನು ಯಾರು ತಂದಿಟ್ಟಿದ್ದಾರೆಂದು ಪತ್ತೆ ಮಾಡುವುದು ಇದೀಗ ಪೊಲೀಸರಿಗೆ ಸವಾಲಾಗಿದೆ.
ಯುವತಿಯನ್ನು ಬೇರೆಡೆ ಕೊಲೆ ಮಾಡಿ ಮೃತದೇಹವನ್ನು ತಂದಿಟ್ಟಿರುವ ಸಾಧ್ಯತೆಯೆ ಬಗ್ಗೆ ಅಂದಾಜಿಸಲಾಗಿತ್ತು. ವ್ಯವಸ್ಥಿತವಾಗಿ ಹತ್ಯೆ ಮಾಡಿ, ಯುವತಿಯನ್ನು ಡ್ರಮ್ನಲ್ಲಿ ಹಾಕಿದ್ದಾರೆ. ನಂತರ ಆಕೆಯ ಬಟ್ಟೆ ಹಾಗೂ ಮಕ್ಕಳ ಬಟ್ಟೆಗಳನ್ನು ತುಂಬಿಸಿ, ಡ್ರಮ್ ಮೇಲೆ ಸೆಲ್ಲೋ ಟೇಪ್ ಅಂಟಿಸಿ ಮುಚ್ಚಳ ಹಾಕಿದ್ದರು ಎಂದು ರೈಲ್ವೆ ಎಸ್ಪಿ ಸೌಮ್ಯಲತಾ ಹೇಳಿಕೆ ನೀಡಿದ್ದರು.
ಸದ್ಯ ಕಾಲುಂಗುರು ಹಾಗೂ ಮಾಂಗಲ್ಯದ ಶೈಲಿಯನ್ನು ಗಮನಿಸಿ ಕೊಲೆಯಾಗಿರುವ ಯುವತಿಯ ಉತ್ತರ ಭಾರತ ಮೂಲದವಳು ಎನ್ನುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಡಿ.24 ರಿಂದ ಡಿ.26ರ ನಡುವೆ ಉತ್ತರ ಭಾರತ ಭಾಗದಿಂದ ಬಂದ ರೈಲುಗಳ ಬಗ್ಗೆ ಮಾಹಿತಿ ಪಡೆದು ಇದೀಗ ಪೊಲೀಸರು ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ.