ಟೊಮ್ಯಾಟೋ ವ್ಯಾಪಾರಿಗೆ 32 ಲಕ್ಷ ವಂಚಿಸಿದ ಆರೋಪಿಗಳು

Crime Logo
Published on

ಬೆಂಗಳೂರು: ವ್ಯಾಪಾರಿಯೊಬ್ಬರಿಂದ ಮೂರು ಲೋಡ್ ಟೊಮ್ಯಾಟೋ ಪಡೆದುಕೊಂಡು ಬಳಿಕ ಹಣದ ಮಧ್ಯೆ ಬಿಳಿ ಹಾಳೆಗಳನ್ನು ನೀಡಿ ವಂಚಿಸಿದ ಆರೋಪದಡಿ ಇಬ್ಬರು ವ್ಯಕ್ತಿಗಳ ವಿರುದ್ಧ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೋಲಾರದ ತರಕಾರಿ ವ್ಯಾಪಾರಿ ಆದಿತ್ಯ ಷಾ ಎಂಬುವವರು ನೀಡಿದ ದೂರಿನ ಮೇರೆಗೆ ಸಂಜಯ್ ಮತ್ತು ಮುಖೇಶ್ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾರ ಆದಿತ್ಯ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ತಮ್ಮ ದೊಡ್ಡಪ್ಪನ ಹೆಸರಿನಲ್ಲಿ ಟ್ರೇಡಿಂಗ್ ಲೈಸೆನ್ಸ್ ಪಡೆದು ತರಕಾರಿ ವ್ಯವಹಾರ ಮಾಡುತ್ತಿದ್ದಾರೆ. ಕೋಲಾರ ಎಪಿಎಂಸಿಯಲ್ಲಿ ರೈತರಿಂದ ತರಕಾರಿಗಳನ್ನು ಖರೀದಿಸಿ ಪಶ್ಚಿಮ ಬಂಗಾಳ ಸಿಲಿಗುರಿ ಎಪಿಎಂಸಿ ಮಾರುಕಟ್ಟೆಗೆ ರವಾನಿಸುತ್ತಾರೆ. ಅಲ್ಲಿನ ಟ್ರೇಡರ್‌ಗಳು ತರಕಾರಿ ಸ್ವೀಕರಿಸಿ ಬಳಿಕ ಬೆಂಗಳೂರಿನಲ್ಲಿ ಅವರ ಪರಿಚಿತ ವ್ಯಾಪಾರಿಗಳ ಮುಖಾಂತರ ನಗದು ರೂಪದಲ್ಲಿ ಹಣ ಕೊಡುತ್ತಾರೆ.
ಹಣದ ಮಧ್ಯೆ ಬಿಳಿ ಹಾಳೆ ಇಟ್ಟು ವಂಚನೆ:
ಜು.೧೦ರಂದು ಮುಖೇಶ್ ಎಂಬಾತ ಪಶ್ಚಿಮ ಬಂಗಾಳದ ಸಿಲಿಗಿರಿಗೆ ಮೂರು ಲೋಡ್ ಟೊಮ್ಯಾಟೋ ಕಳುಹಿಸುವಂತೆ ಆದಿತ್ಯಗೆ ಕರೆ ಮಾಡಿ ಕೇಳಿದ್ದಾನೆ. ಅದರಂತೆ ಆದಿತ್ಯ ಕೋಲಾರದಿಂದ ಮೂರು ಲೋಡ್ ಟೊಮ್ಯಾಟೋವನ್ನು ಸಿಲಿಗುರಿಗೆ ಕಳುಹಿಸಿದ್ದಾರೆ. ಟೊಮ್ಯಾಟೋ ಸ್ವೀಕರಿಸಿದ ಬಳಿಕ ಮುಖೇಶ್, ಆದಿತ್ಯನ ದೊಡ್ಡಪ್ಪನಿಗೆ ಕರೆ ಮಾಡಿ ಬೆಂಗಳೂರಿನ ಸಂಜಯ್ ಎಂಬುವವರ ಮುಖಾಂತರ ನಿಮಗೆ ಹಣ ಕಳುಹಿಸಿದ್ದೇನೆ. ಅವರು ವೈಟ್‌ಫೀಲ್ಡ್‌ನ ಹಗದೂರಿನ ಬೇಕರಿ ಬಳಿ ಹಣ ನೀಡುತ್ತಾರೆ ಎಂದು ತಿಳಿಸಿದ್ದಾನೆ. ಆದಿತ್ಯ ಜು.೧೫ರಂದು ಮಧ್ಯಾಹ್ನ ಹಗದೂರಿನ ಬೇಕರಿ ಬಳಿ ಸಂಜಯ್‌ನನ್ನು ಭೇಟಿಯಾಗಿದ್ದಾರೆ. ಈ ವೇಳೆ ಸಂಜಯ್ ೨೦ ಲಕ್ಷ ರೂ. ಹಣವಿದೆ ಎಂದು ೫೦೦ ಮುಖಬೆಲೆಯ ಬ್ಯಾಂಕ್‌ನ ಚೀಟಿಯಿದ್ದ ಹಣದ ನಾಲ್ಕು ಪೊಟ್ಟಣಗಳನ್ನು ಆದಿತ್ಯಗೆ ನೀಡಿದ್ದಾನೆ. ಬೇಕರಿ ಬಳಿ ಸಾಕಷ್ಟು ಜನರು ಇದ್ದ ಹಿನ್ನೆಲೆಯಲ್ಲಿ ಹಣದ ಪೊಟ್ಟಗಳನ್ನು ಬಿಚ್ಚಿ ಪರಿಶೀಲಿಸದೆ ಆ ಹಣದೊಂದಿಗೆ ಆದಿತ್ಯ ಕೋಲಾರಕ್ಕೆ ತೆರಳಿದ್ದಾರೆ.
ಒಂದು ಕಟ್ಟು ಅಸಲಿ ಉಳಿದೆಲ್ಲ ನಕಲಿ:
ಆದಿತ್ಯ ಮತ್ತು ಅವರ ದೊಡ್ಡಪ್ಪ ಹಣದ ಪೊಟ್ಟಣಗಳನ್ನು ಬಿಚ್ಚಿ ನೋಡಿದಾಗ ೫೦೦ ರೂ.ಮುಖಬೆಲೆಯ ನೋಟಿನ ೧೦ ಕಟ್ಟುಗಳು ಕಂಡು ಬಂದಿವೆ. ಈ ಪೈಕಿ ಒಂದು ಕಟ್ಟುನ್ನು ಬಿಚ್ಚಿ ನೋಡಿದಾಗ ಕಟ್ಟಿನ ಮೇಲೆ ೫೦೦ ರೂ. ಮುಖಬೆಲೆಯ ಅಸಲಿ ನೋಟು ಇರಿಸಿ, ಒಳಗೆ ಬಿಳಿ ಹಾಳೆಗಳು ಇಟ್ಟಿರುವುದು ಕಂಡು ಬಂದಿದೆ. ತಕ್ಷಣ ಮುಖೇಶ್ ಮತ್ತು ಸಂಜಯ್‌ಗೆ ಕರೆ ಮಾಡಿದಾಗ ಇಬ್ಬರ ಮೊಬೈಲ್‌ಗಳು ಸ್ವಿಚ್ಡ್ ಆಫ್ ಬಂದಿದೆ. ಈ ವೇಳೆ ಆದಿತ್ಯಗೆ ತಾನು ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ. ಈ ಸಂಬಂಧ ಆದಿತ್ಯ ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮುಖೇಶ್ ಮತ್ತು ಸಂಜಯ್ ಮೂರು ಲೋಡ್ ಟೊಮ್ಯಾಟೋ ಪಡೆದು ಬಿಳಿ ಪೇಪರ್ ಬಂಡಲ್‌ಗಳನ್ನೇ ಹಣವೆಂದು ನಂಬಿಸಿ ವಂಚನೆ ಮಾಡಿದ್ದಾರೆ. ಮೂರು ಲೋಡ್ ಟೊಮ್ಯಾಟೋಗೆ ೨೦ ಲಕ್ಷ ರೂ. ಹಾಗೂ ಬಾಕಿ ೧೨ ಲಕ್ಷ ರೂ. ಸೇರಿ ಒಟ್ಟು ೩೨ ಲಕ್ಷ ರೂ. ವಂಚಿಸಿರುವ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಶೋಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net