ನಕಲಿ ದಾಖಲೆ ಸೃಷ್ಟಿಸಿ ವಂಚಿಸಿದ ಆರೋಪ: ಮೂವರು ಬಿಲ್ಡರ್ಸ್ ವಿರುದ್ಧ ದೂರು ದಾಖಲು

Crime Logo
Published on

ಬೆಂಗಳೂರು: ಹಣ ಪಡೆದು ಫ್ಲ್ಯಾಟ್‌ಗಳನ್ನು ನೋಂದಣಿ ಮಾಡಿಕೊಟ್ಟು ನಂತರ ನಂಬಿಕೆ ದ್ರೋಹ ಹಾಗೂ ವಂಚನೆ ಎಸಗಿದ್ದಾರೆ ಎಂದು ಆರೋಪಕ್ಕೆ ಸಂಬಂಧಿಸಿದಂತೆ ಆರ್‌ಆರ್‌ಬಿಸಿ ಪ್ರಥಮ್ ಅಪಾರ್ಟ್‌ಮೆಂಟ್ ಬಿಲ್ಡರ್ಸ್‌ನ ಮೂವರ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಂಪನಿ ನಿರ್ದೇಶಕರಾದ ರಂಜಿತ್ ಸಾಹ, ಹರೀಶ್ ಸಾಹ, ಮಿಥೇಶ್ ಸಾಹ ವಿರುದ್ಧ ಪ್ರಕರಣ ದಾಖಲಾಗಿದೆ. ವಿದ್ಯಾಸಾಗರ್ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬನಶಂಕರಿ ಎರಡನೇ ಹಂತದಲ್ಲಿ ನಿವೇಶನ ಸಂಖ್ಯೆ ೮ರಲ್ಲಿರುವ ೯೦*೧೦೦ ವಿಸ್ತೀರ್ಣದ ನಿವೇಶನದಲ್ಲಿ ಅಪಾರ್ಟ್‌ಮೆಂಟ್ ಕಟ್ಟಡ ನಿರ್ಮಾಣ ಮಾಡಲು ಜಂಟಿ ಕರಾರು ಪತ್ರ ಮಾಡಿಕೊಂಡಿದ್ದ ಆರ್‌ಆರ್‌ಬಿಸಿ ಪ್ರಥಮ್ ಸಂಸ್ಥೆ, ನೆಲ ಮತ್ತು ಮೂರು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಿತ್ತು. ಕಟ್ಟಡದಲ್ಲಿ ಬಿಲ್ಡರ್ಸ್ ಪಾಲಿಗೆ ಬಂದ ಫ್ಯ್ಲಾಟ್‌ಗಳ ಪೈಕಿ ೧೦೨ ಅನ್ನು ದೂರುದಾರರ ಹೆಸರಿಗೆ ನೋಂದಣಿ ಮಾಡಿಕೊಟ್ಟಿತ್ತು. ಉಳಿದ ಐದು ಫ್ಲ್ಯಾಟ್‌ಗಳನ್ನೂ ಸತೀಶ್, ಜಯತೀರ್ಥ, ವರುಣ್ ಗೋರೆ, ಪುಷ್ಪರಾಣಿ ಸಿನ್ನಾ, ಫಣೀಂದ್ರ ಎಲ್. ಶರ್ಮಾ ಹಾಗೂ ಇತರರಿಗೆ ನೋಂದಣಿ ಮಾಡಿಕೊಡಲಾಗಿತ್ತು. ಮಾರಾಟ ಮಾಡುವ ಸಂದರ್ಭದಲ್ಲಿ ಫ್ಲ್ಯಾಟ್‌ಗಳ ಮೇಲೆ ಯಾವುದೇ ವಹಿವಾಟು ನಡೆದಿಲ್ಲ ಎಂದು ದಾಖಲೆ ತೋರಿಸಿದ್ದರು. ಹಣ ಪಡೆದು ಮಾರಾಟ ಮಾಡಿದ್ದರು. ಬಿಲ್ಡರ್ಸ್ ಪಾಲಿನ ಹತ್ತು ಫ್ಲ್ಯಾಟ್‌ಗಳನ್ನು ಸತ್ಯಚಂದನ್ ಎಂಬುವರಿಗೆ ೨೦೨೧ ರ ಸೆ.೭ರಂದು ಸೇಲ್ ಅಗ್ರಿಮೆಂಟ್ ಮಾಡಿಕೊಟ್ಟಿರುವುದಾಗಿ ಇತ್ತೀಚೆಗೆ ಗೊತ್ತಾಗಿತ್ತು. ಫ್ಲ್ಯಾಟ್‌ಗಳಿಗೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿಸಿ ಹಣ ಪಡೆದು ವಚಿಸಿದ್ದಾರೆ ಎಂಬ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net