

ಬೆಂಗಳೂರು: ಕರ್ತವ್ಯನಿರತ ಎಎಸ್‌ಐ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ವಿಶ್ವನಾಥ್(೩೦) ಬಂಧಿತ. ಆರೋಪಿ ಸೆ.೧೩ ರಂದು ರಾಜಾಜಿನಗರ ಠಾಣೆಯ ಎಎಸ್‌ಐ ಸುರೇಶ್ ಎಂಬುವರ ಮೇಲೆ ಹಲ್ಲೆ ನಡೆಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೆ.೧೩ರಂದು ಎಎಸ್‌ಐ ಸುರೇಶ್ ಹಾಗೂ ಕಾನ್‌ಸ್ಟೇಬಲ್ ರವಿಕುಮಾರ್ ಹೊಯ್ಸಳದಲ್ಲಿ ಗಸ್ತು ತಿರುಗುತ್ತಿದ್ದರು. ಆಗ ಪೊಲೀಸ್ ಸಹಾಯವಾಣಿಯಾದ ೧೧೨ಗೆ ಕರೆ ಮಾಡಿ, ಅಪರಿಚಿತ ವ್ಯಕ್ತಿಯೊಬ್ಬ ಮನೆಯ ಟೆರಾಸ್ ಮೇಲೆ ಓಡಾಡುತ್ತಿದ್ದಾನೆ ಎಂಬ ದೂರು ನೀಡಿದ್ದರು. ಕೂಡಲೇ ಸ್ಥಳಕ್ಕೆ ಹೋಗುವಂತೆ ಸಹಾಯವಾಣಿ ಸಿಬ್ಬಂದಿ ಸೂಚಿಸಿದರು. ಹೀಗಾಗಿ ಠಾಣೆ ವ್ಯಾಪ್ತಿಯ ರಾಜಾಜಿನಗರ ೬ನೇ ಬ್ಲಾಕ್‌ನಲ್ಲಿ ಮನೆ ಬಳಿ ಮುಂಜಾನೆ ೩ ಗಂಟೆಗೆ ಹೋದಾಗ, ಆರೋಪಿ ಮನೆಯ ಟೆರಾಸ್ ಮೇಲೆ ಮದ್ಯದ ಅಮಲಿನಲ್ಲಿ ಓಡಾಡುತ್ತಿದ್ದ. ಆತನನ್ನು ಹಿಡಿಯಲು ಹೋದಾಗ ಕಬ್ಬಿಣದ ಪೈಪ್‌ನಿಂದ ಎಎಸ್‌ಐ ಸುರೇಶ್ ಅವರ ತಲೆಗೆ ಹೊಡೆದಿದ್ದು, ತೀವ್ರ ರಕ್ತಸ್ರಾವವಾಗಿತ್ತು. ಬಳಿಕ ಮಾಗಡಿ ರೋಡ್ ಠಾಣೆ ಹೊಯ್ಸಳ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡು ಆರೋಪಿಯನ್ನು ಹಿಡಿದುಕೊಂಡು ವಿಚಾರಣೆ ನಡೆಸಲಾಗಿತ್ತು. ಆತ ಕಾರ್ಯನಿಮಿತ್ತ ನಗರಕ್ಕೆ ಬಂದು ಮದ್ಯದ ಅಮಲಿನಲ್ಲಿ ಮನೆಯ ಟೆರಾಸ್ ಹತ್ತಿ ಸ್ಥಳೀಯರಲ್ಲಿ ಗಾಬರಿ ಉಂಟು ಮಾಡಿರುವುದು ಗೊತ್ತಾಗಿದೆ. ಹಲ್ಲೆಗೊಳಗಾಗಿದ್ದ ಸುರೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಚೇತರಿಸಿಕೊಂಡಿದ್ದಾರೆ. ಇದೀಗ ಎಎಸ್‌ಐ ಸುರೇಶ್ ಅವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿದ್ದು, ಕೋರ್ಟ್ ಸೂಚನೆ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.