

ಬೆಂಗಳೂರು: ಬಸ್‌ಗಾಗಿ ಕಾಯುತ್ತಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯನ್ನು ಜಾಲಹಳ್ಳಿ ಕ್ರಾಸ್‌ನಲ್ಲಿ ಇಬ್ಬರು ಯುವತಿಯರು ಸೇರಿ ಆರು ಮಂದಿ ಅಪಹರಣ ಮಾಡಿದ ಆರೋಪ ಕೇಳಿ ಬಂದಿದೆ.
ಜೂ.೮ರಂದು ಈ ಘಟನೆ ನಡೆದಿದೆ. ಅಪಹರಣಕಾರರಿಂದ ತಪ್ಪಿಸಿಕೊಂಡ ವಿದ್ಯಾರ್ಥಿನಿ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಈ ದೂರಿನ ಆಧಾರದ ಮೇಲೆ ಅಪಹರಣ ಘಟನೆ ನಡೆದ ಸ್ಥಳದ ಆಧಾರದ ಮೇಲೆ ಲಷ್ಕರ್ ಠಾಣೆ ಪೊಲೀಸರು, ಪ್ರಕರಣವನ್ನು ಪೀಣ್ಯ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ. ಈ ಸಂಬಂಧ ತನಿಖೆ ಆರಂಭಿಸಿರುವ ಪೀಣ್ಯ ಪೊಲೀಸರು, ವಿದ್ಯಾರ್ಥಿನಿಯನ್ನು ವಿಚಾರಣೆ ಮಾಡಿದಾಗ ಘಟನೆ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಏನಾದರೂ ಪ್ರಶ್ನೆಗಳನ್ನು ಕೇಳಿದರೆ ಆಳುತ್ತಾಳೆ. ಇದರಿಂದ ಪೊಲೀಸರಿಗೆ ವಿದ್ಯಾರ್ಥಿನಿಯ ವಿಚಾರಣೆ ಮಾಡುವುದೇ ಸವಾಲಾಗಿ ಪರಿಣಮಿಸಿದೆ.
ವಿದ್ಯಾರ್ಥಿನಿ ನೀಡಿದ ದೂರಿನ ಮಾಹಿತಿ ಮೇರೆಗೆ ಪೊಲೀಸರು ಜಾಲಹಳ್ಳಿ ಕ್ರಾಸ್‌ನ ಸುತ್ತಮುತ್ತ ಸಿಸಿ ಕ್ಯಾಮರಾಗಳ ದೃಶ್ಯ ಪರಿಶೀಲನೆ ಮಾಡಿದ್ದು, ಅದರಲ್ಲಿ ವಿದ್ಯಾರ್ಥಿನಿ ಹಾಗೂ ಅಪಹರಣಕಾರರ ಯಾವುದೇ ಸುಳಿವು ಸಿಕ್ಕಿಲ್ಲ. ವಿದ್ಯಾರ್ಥಿನಿ ಸರಿಯಾದ ಮಾಹಿತಿ ನೀಡದೇ ಇರುವುದರಿಂದ ಪೊಲೀಸರು ಈ ದೂರಿನ ಬಗ್ಗೆ ಅನುಮಾನಿಸುವಂತಾಗಿದೆ. ಆದರೂ ವಿವಿಧ ಆಯಾಮಗಳಲ್ಲಿ ಪೀಣ್ಯ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪ್ರಜ್ಞೆ ತಪ್ಪಿಸಿ ಅಪಹರಿಸಿದರು:
ನಾನು ತುಮಕೂರಿನ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದೇನೆ. ಕಳೆದ ತಿಂಗಳು ಯಲಹಂಕದಲ್ಲಿರುವ ಮಾವನ ಮನೆಗೆ ಬಂದಿದ್ದೆ. ಜೂ.೮ರಂದು ಬೆಳಗ್ಗೆ ತುಮಕೂರಿನ ಕಾಲೇಜಿಗೆ ತೆರಳಲು ಯಲಹಂಕದ ಮಾವನ ಮನೆಯಿಂದ ಎನ್‌ಇಎಸ್ ಬಸ್ ನಿಲ್ದಾಣಕ್ಕೆ ದ್ವಿಚಕ್ರ ವಾಹನದಲ್ಲಿ ಡ್ರಾಪ್ ಪಡೆದಿದ್ದೆ. ಅಲ್ಲಿಂದ ಬಸ್‌ನಲ್ಲಿ ಜಾಲಹಳ್ಳಿ ಕ್ರಾಸ್‌ಗೆ ಬಂದು ತುಮಕೂರಿಗೆ ತೆರಳಲು ಬಸ್‌ಗಾಗಿ ಕಾಯುತ್ತಾ ನಿಂತಿದ್ದೆ. ಈ ಸಮಯದಲ್ಲಿ ಇಬ್ಬರು ಹುಡುಗಿಯರು ನನ್ನ ಬಳಿ ಬಂದರು. ಒಬ್ಬಳು ನನ್ನ ಕೈ ಹಿಡಿದುಕೊಂಡರೆ, ಮತ್ತೊಬ್ಬಳು ನನ್ನ ಮುಖಕ್ಕೆ ಮಾಸ್ಕ್ ಹಾಕಿದಳು. ಅಷ್ಟರಲ್ಲಿ ನನಗೆ ಪ್ರಜ್ಞೆ ತಪ್ಪಿತು. ಬಳಿಕ ನಾನು ಎಚ್ಚರಗೊಂಡಾಗ ಕಾರಿನ ಮಧ್ಯದ ಸೀಟಿನಲ್ಲಿ ಕುಳಿತ್ತಿದ್ದೆ. ಆ ಕಾರಿನಲ್ಲಿ ೧೮-೧೯ ವರ್ಷದ ಇಬ್ಬರು ಹುಡುಗಿಯರು ಹಾಗೂ ೨೯-೩೦ ವರ್ಷದ ನಾಲ್ವರು ಯುವಕರಿದ್ದರು. ನಂತರ ಅವರು ಟೀ ಕುಡಿಯಲು ಕಾರನ್ನು ನಿಲ್ಲಿಸಿ ಹೋದರು. ಆಗ ನಾನು ಕಾರಿನ ಡೋರ್ ತೆರೆದು ತಪ್ಪಿಸಿಕೊಂಡು ಸ್ವಲ್ಪ ದೂರು ಓಡಿದೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.
ಮುಂದುವರಿದು, ಈ ವೇಳೆ ಆರು ಮಂದಿ ನನ್ನನ್ನು ಸ್ವಲ್ಪ ದೂರ ಹಿಂಬಾಲಿಸಿದರು. ನಾನು ಅವರ ಕೈಗೆ ಸಿಗದೆ ಜೋರಾಗಿ ಓಡಿ ಹೋದೆ. ಬಳಿಕ ಸ್ಥಳೀಯರನ್ನು ಇದು ಯಾವ ಊರು ಎಂದು ಕೇಳಿದೆ. ಅದಕ್ಕೆ ಅವರು ಇದು ಮೈಸೂರು ಎಂದು ಹೇಳಿದಾಗ, ವಿಳಾಸ ಕೇಳಿಕೊಂಡು ಮೈಸೂರು ಬಸ್ ನಿಲ್ದಾಣಕ್ಕೆ ಬಂದೆ. ಬಳಿಕ ವ್ಯಕ್ತಿಯೊಬ್ಬರ ಮೊಬೈಲ್ ಪಡೆದು ಮನೆಯವರಿಗೆ ಕರೆ ಮಾಡಿ ವಿಚಾರ ತಿಳಿಸಿದೆ. ಬಳಿಕ ನಮ್ಮ ಕುಟುಂಬದ ಸದಸ್ಯರು ಸಂಜೆ ಆರು ಗಂಟೆಗೆ ಮೈಸೂರಿಗೆ ಬಂದು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದರು. ಜಾಲಹಳ್ಳಿ ಕ್ರಾಸ್‌ನಿಂದ ನನ್ನನ್ನು ಕಾರಿನಲ್ಲಿ ಕರೆದುಕೊಂಡು ಬಂದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿನಿ ದೂರಿನಲ್ಲಿ ಮನವಿ ಮಾಡಿದ್ದಾಳೆ.