ಲೋಕ ವಿಚಾರಣೆಗೆ ಆರೋಪಿ ಮುಖ್ಯಮಂತ್ರಿಯೇ ಸಮಯ ನಿಗದಿ: ವಿಲಕ್ಷಣವೆಂದ ಆರ್.ಅಶೋಕ್

IMG_20241106_113930
Published on

ಬೆಂಗಳೂರು: ಯಾವುದೇ ಪ್ರಕರಣದಲ್ಲಿ ಆರೋಪಿ ವಿಚಾರಣೆ ಅವಧಿಯು ತನಿಖಾಧಿಕಾರಿ ವಿವೇಚನೆಗೆ ಬಿಟ್ಟದ್ದು. ಒಂದು ಗಂಟೆ, ಒಂದು ದಿನ ಅಥವಾ 48 ಗಂಟೆಯೂ ಆಗಬಹುದು. ಲೋಕಾಯುಕ್ತ ವಿಚಾರಣೆಗೆ ಹಾಜರಾಗಿರುವ ಆರೋಪಿ ಮುಖ್ಯಮಂತ್ರಿ ಸಿದ್ದರಾಮಯ್ಯ, ತಾವೇ ಮುಂಚಿತವಾಗಿ ವಿಚಾರಣೆಗೆ ಸಮಯ ನಿಗದಿ ಮಾಡಿರುವುದು ವಿಲಕ್ಷಣ ನಿದರ್ಶನವೆಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೀಗಳೆದರು.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿಎಂ ಅಧಿಕೃತ ಪ್ರವಾಸ ವೇಳಾ ಪಟ್ಟಿ ಪ್ರಕಾರ ಬೆಳಗ್ಗೆ 10ಕ್ಕೆ ಲೋಕಾಯುಕ್ತ ವಿಚಾರಣೆಗೆ ಹಾಜರು, ಅಪರಾಹ್ನ 12ಕ್ಕೆ ಚನ್ನಪಟ್ಟಣ ಉಪ ಚುನಾವಣಾ ಪ್ರಚಾರ ಚಟುವಟಿಕೆಗಳಲ್ಲಿ ಭಾಗಿಯಾಗಲಿದ್ದು, ಲೋಕಾಯುಕ್ತ ಅಧಿಕಾರಿಗೆ ಇಂತಿಷ್ಟೇ ಸಮಯವೆಂದು ನಿರ್ದೇಶನ ನೀಡುವುದು ಹೇಗೆ ಸಾಧ್ಯ ?

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಲ್ಲ, ಆರೋಪಿಯಾಗಿ ವಿಚಾರಣೆಗೆ ಹಾಜರಾಗಿದ್ದಾರೆ. ಸಿಎಂ ನಿಗದಿಪಡಿಸಿದ ಸಮಯವನ್ನೇ ಲೋಕಾಯುಕ್ತ ಅಧಿಕಾರಿಗಳು ಒಪ್ಪಿದರೆ ನಿಷ್ಪಕ್ಷಪಾತ ತನಿಖೆ ಹೇಗಾಗುತ್ತದೆ. ತಾವೇ ನೇಮಿಸಿದ ಆಧಿಕಾರಿಯೊಬ್ಬರ ಮುಂದೆ ವಿಚಾರಣೆ ಎದುರಿಸಿರುವ ಸಿದ್ದರಾಮಯ್ಯಗೆ ನಾಚಿಕೆಯಾಗಬೇಕು ಎಂದು ಆರ್.ಅಶೋಕ್ ಅಣಕಿಸಿದರು.

ಸರ್ಕಾರಕ್ಕೆ ಹೋಗೋ ಕಾಲ

ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗೆ ಯಮಗಂಡ ಕಾಲ, ಗುತ್ತಿಗೆದಾರರಿಗೆ ರಾಹುಕಾಲ, ರೈತರಿಗೆ ಕೊನೆಗಾಲ, ಜ‌ನರಿಗೆ ವಿನಾಶಕಾಲ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಹೋಗೋ ಕಾಲವಿದು. ಬಿಜೆಪಿ ಆಡಳಿತದಲ್ಲಿ ಜನರ ಅನುಕೂಲಕ್ಕಾಗಿ ಸರ್ಕಾರಿ ಸೇವೆಗಳನ್ನು ಒದಗಿಸಲು ಸಕಾಲ ಜಾರಿಗೆ ತಂದಿದ್ದವು. ಆದರೆ, ಕಾಂಗ್ರೆಸ್ ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ರಾಜ್ಯದ ಜನರಿಗೆ ದುರ್ಭಿಕ್ಷ ಕಾಲ ತಂದಿಟ್ಟಿದೆ ಎಂದು ವಾಗ್ದಾಳಿ ಮಾಡಿದರು‌.

ಸಿದ್ದರಾಮಯ್ಯನವರು ಮಾತೆತ್ತಿದರೆ ನನ್ನದು ತೆರೆದ ಪುಸ್ತಕ ಎನ್ನುತ್ತಾರೆ. ಆದರೆ ತೆರೆದ ಪುಸ್ತಕದ ಪ್ರತಿ ಪುಟವು ಅಕ್ರಮ, ಹಗರಣ, ಭ್ರಷ್ಟಾಚಾರಗಳ ಕಪ್ಪು ಮಸಿ ತುಂಬಿಕೊಂಡಿದ್ದು ಒಂದು ಪುಟವೂ ಶುದ್ಧವಾಗಿಲ್ಲ. ಇದೊಂದು 80% ವಸೂಲಿ ಸರ್ಕಾರವಾಗಿದೆ ಎಂದು ದೂರಿದರು‌.

ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಇಲಾಖೆ ಅಧಿಕಾರಿಗಳು, ಮದ್ಯ ವಹಿವಾಟಿಗೆ ವಾರಕ್ಕೆ 18 ಕೋಟಿ ರೂ ವಸೂಲಿ ಮಾಡುತ್ತಿರುವ 900 ಕೋಟಿ ರೂ.ಗೂ ಅಧಿಕ ಮೊತ್ತದ ಹಗರಣ ಹೊರಬಿದ್ದಿದೆ. ಕೂಡಲೇ ತಿಮ್ಮಾಪುರ ಸಚಿವ ಸ್ಥಾನಕ್ಕೆ ನೀಡಬೇಕು. ಪ್ರಕರಣದ ತನಿಖೆ ಸಿಬಿಐಗೆ ಒಪ್ಪಿಸಬೇಕು ಎಂದು ಆರ್.ಅಶೋಕ್ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net