ಬಾಡಿಗೆಗೆ ಇದ್ದ ಯುವತಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ ಆರೋಪಿ ಸೆರೆ

arrested
Published on

ಬೆಂಗಳೂರು: ತನ್ನ ಮನೆಯಲ್ಲಿ ಬಾಡಿಗೆ ಇದ್ದ ಯುವತಿಯನ್ನು ಪ್ರೀತಿಸುವಂತೆ ಪೀಡಿಸಿದಲ್ಲದೆ ಆಕೆ ಮತ್ತು ಈಕೆಯ ಸ್ನೇಹಿತನ ಮೇಲೆ ಮಾರಣಾಂತಿಕವಾಗಿ ಹಲ್ಲೆಗೈದಿದ್ದ ಆರೋಪಿಯನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಮಲಾನಗರದ ನಿವಾಸಿ ಶ್ರೀಕಾಂತ್ (೩೬) ಬಂಧಿತ ಆರೋಪಿ.

ಆರೋಪಿಯು ೨೧ ವರ್ಷದ ಯುವತಿ ಹಾಗೂ ಆಕೆಯ ಸ್ನೇಹಿತನ ಮೇಲೆ ಏ.೮ರಂದು ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಕಟರ್‌ನಿಂದ ಹಲ್ಲೆಗೈದಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಮಲಾನಗರದಲ್ಲಿರುವ ಆರೋಪಿ ಶ್ರೀಕಾಂತ್‌ನ ಮನೆಯಲ್ಲಿ ಯುವತಿ ಕಳೆದ ಒಂದು ವರ್ಷದ ಹಿಂದೆ ಬಾಡಿಗೆಗೆ ವಾಸವಿದ್ದರು. ವಿವಾಹಿತನಾಗಿರುವ ಈತ ತನ್ನನ್ನು ಪ್ರೀತಿಸುವಂತೆ ಯುವತಿಯನ್ನು ಪೀಡಿಸುತ್ತಿದ್ದ. ಶ್ರೀಕಾಂತ್ ಕಾಟಕ್ಕೆ ಬೇಸತ್ತ ಯುವತಿ ಆತನ ಪತ್ನಿಗೆ ವಿಷಯ ತಿಳಿಸಿ ನಂತರ ಬಸವೇಶ್ವರನಗರ ಠಾಣೆಗೆ ಈ ಹಿಂದೆ ದೂರು ನೀಡಿದ್ದರು. ಯುವತಿಯ ಮನವಿ ಮೇರೆಗೆ ಆತನ ವಿರುದ್ಧ ಪ್ರಕರಣ ದಾಖಲಿಸದೆ ಆರೋಪಿಗೆ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದರು.

ಬಳಿಕ ಯುವತಿ ಆರೋಪಿಯ ಮನೆಯ ಖಾಲಿ ಮಾಡಿಕೊಂಡು ಕುರುಬರಹಳ್ಳಿಯಲ್ಲಿರುವ ಮನೆಯೊಂದಕ್ಕೆ ಸ್ಥಳಾಂತರವಾಗಿದ್ದರು.

ಕಾಲೇಜು ಕ್ಯಾಂಪಸ್‌ವರೆಗೂ ಹಿಂಬಾಲಿಸುತ್ತಿದ್ದ:

ಕೆಲ ಕಾಲ ಸುಮ್ಮನಿದ್ದ ಶ್ರೀಕಾಂತ್ ಕಳೆದ ೩ ತಿಂಗಳುಗಳಿಂದ ಪುನಃ ಯುವತಿಯ ಬೆನ್ನು ಬಿದ್ದಿದ್ದ. ಆಕೆ ವ್ಯಾಸಂಗ ಮಾಡುತ್ತಿದ್ದ ಕಾಲೇಜು ಕ್ಯಾಂಪಸ್‌ನವರೆಗೂ ಹಿಂಬಾಲಿಸುತ್ತಿದ್ದ. ಇದೇ ರೀತಿ ಮೂರು ದಿನಗಳ ಕಾಲ ಸತತವಾಗಿ ಆಕೆಯನ್ನು ಹಿಂಬಾಲಿಸಿದ್ದ ಆರೋಪಿ ಏ.೮ರಂದು ದೇವೇಗೌಡ ಪೆಟ್ರೋಲ್ ಬಂಕ್‌ನ ಬಳಿಯಿರುವ ಬಸ್ ನಿಲ್ದಾಣದಲ್ಲಿ ಯುವತಿ ಹಾಗೂ ಆಕೆಯ ಸ್ನೇಹಿತ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದಿದ್ದ ಆರೋಪಿಯು, ಓ ನೀನು ಇವನನ್ನು ಪ್ರೀತಿಸುತ್ತಿದ್ದಿಯಾ? ಅದಕ್ಕೆ ನನ್ನ ಲವ್ ಮಾಡಲ್ಲ ಅಂದಿದ್ದಾ ನೀನು... ಎನ್ನುತ್ತಾ ಯುವತಿ ಹಾಗೂ ಆಕೆಯ ಸ್ನೇಹಿತನ ಕಪಾಳಕ್ಕೆ ಹೊಡೆದಿದ್ದ. ಅಲ್ಲದೆ ಕಟರ್‌ನಿಂದ ಇಬ್ಬರ ಮುಖದ ಮೇಲೆಯೂ ಹಲ್ಲೆಗೈದಿದ್ದ. ಸ್ಥಳೀಯರು ನೆರವಿಗೆ ಬಂದಿದ್ದರಿಂದ ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಲೆಯತ್ನ ಪ್ರಕರಣ ದಾಖಲು:

ಬಳಿಕ ಯುವತಿ ನೀಡಿದ್ದ ದೂರಿನನ್ವಯ ಶ್ರೀಕಾಂತ್ ವಿರುದ್ಧ ಹತ್ಯೆಯತ್ನದ ಆರೋಪದಡಿ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿಯನ್ನು ಬಂಧಿಸಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ. ಜಗಲಾಸರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net