ಜಾಮೀನು ಸಿಕ್ಕ ಕೂಡಲೇ ಕಳ್ಳ ಪರಾರಿ! 18 ವರ್ಷಗಳ ಬಳಿಕ ಪೊಲೀಸರಿಗೆ ಸಿಕ್ಕಿಬಿದ್ದಿದ್ದೇ ರೋಚಕ | Accused

ವಿಜಯವಾಣಿ - 2025-02-15T195215.562
Published on

ಕೇರಳ: 2006ರಲ್ಲಿ ಹೋಟೆಲ್​ವೊಂದರ ಬಾಗಿಲು ಹೊಡೆದು ಕಳ್ಳತನ ಮಾಡಿದ್ದ ಆರೋಪಿ (Accused), ಜಾಮೀನು ಸಿಕ್ಕ ಕೂಡಲೇ ಕೋರ್ಟ್​ಗೆ ಹಾಜರಾಗದೆ ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಂಡಿದ್ದ. 18 ವರ್ಷಗಳಿಂದ ಖಾಕಿ ಕೈಗೆ ಸಿಗದೆ ಚಳ್ಳೆಹಣ್ಣು ತಿನ್ನಿಸಿದ್ದ ಆರೋಪಿ, ಇಂದು ಸಿಟಿ ಕ್ರೈಮ್​ ಸ್ಕ್ವಾಡ್​ ತಂಡಕ್ಕೆ ಸಿಕ್ಕಿಬಿದ್ದಿದ್ದಾನೆ.

ಜಾಮೀನಿನ ಮೇಲೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣದ ಆರೋಪಿಯನ್ನು ಕಡೆಗೂ 18 ವರ್ಷಗಳ ನಂತರ ಪೊಲೀಸರು ಬಂಧಿಸಿದ್ದಾರೆ. ಕೇರಳದ ಕೋಝಿಕ್ಕೋಡ್‌ನ ಕಕ್ಕಾಯಂನ ಮಾಂಬಾದ್ ಮೂಲದ ಸಕೀರ್ (39) ಎಂಬಾತನನ್ನು ಡಿಸಿಪಿ ಅರುಣ್ ಕೆ. ಪವಿತ್ರನ್ ನೇತೃತ್ವದ ಅಪರಾಧ ದಳ ಬಂಧಿಸಿದೆ. 2006ರಲ್ಲಿ ಕಕ್ಕೋಡಿಯ ಅನುರೂಪ್ ಹೋಟೆಲ್‌ಗೆ ನುಗ್ಗಿ ಹಣ ದೋಚಿದ್ದ ಸಕೀರ್​ನನ್ನು ಪೊಲೀಸರು ಬಂಧಿಸಿದ್ದರು. ಆದರೆ, ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿ, ನ್ಯಾಯಾಲಯಕ್ಕೆ ಹಾಜರಾಗದೆ ಕಣ್ಮರೆಯಾಗಿದ್ದ.

2008ರಲ್ಲಿ, ಮ್ಯಾಜಿಸ್ಟ್ರೇಟ್ ಕೋರ್ಟ್​ ಆರೋಪಿ ಸಕೀರ್​ ವಿರುದ್ಧ ಬಂಧನ ವಾರಂಟ್ ಹೊರಡಿಸಿತು. ಇದರ ಬೆನ್ನಲ್ಲೇ ಪೊಲೀಸರು ಶೋಧ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಿದರು. ಆದರೆ, ಸ್ಥಳೀಯರು ಅಥವಾ ಕುಟುಂಬದೊಂದಿಗೆ ಸಂಪರ್ಕ ಇಟ್ಟುಕೊಳ್ಳದ ಸಕೀರ್​, ಎಲ್ಲಿಯೂ ಪತ್ತೆಯಾಗಲಿಲ್ಲ. ಆರೋಪಿ ಸುಳಿವು ಸಿಗದ ಹಿನ್ನೆಲೆ ಖಾಕಿ ಪಡೆ ಹೊಸ ತಂಡಗಳನ್ನು ರಚಿಸಿ, ಮಾಹಿತಿ ತಡಕಾಡುವಂತೆ ಸೂಚಿಸಿತು.

ಸತತ ಹುಡುಕಾಟದ ಬಳಿಕ ಸಕೀರ್ ಮದುವೆಯಾಗಿ ಬೇರೊಂದು ಹೆಸರಿನಲ್ಲಿ ನೀಲಂಬೂರು ಪ್ರದೇಶದಲ್ಲಿ ವೇಷಭೂಷಣ ಬದಲಿಸಿಕೊಂಡು ವಾಸಿಸುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ರಹಸ್ಯ ಮಾಹಿತಿ ಬಂದಿದ್ದೇ ತಡ, ಹಲವಾರು ದಿನಗಳ ಕಾಲ ಆತನನ್ನು ಸೂಕ್ಷ್ಮವಾಗಿ ಗಮನಿಸಿದ ಅಪರಾಧ ದಳ, ಇಂದು ಬಂಧಿಸಿ, ಕೋರ್ಟ್​ಗೆ ಹಾಜರುಪಡಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net