

ಆಯನೂರು: ಪೊಲೀಸರ ಎದುರಲ್ಲೇ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗದ ಆಯನೂರಿನಲ್ಲಿ ನಡೆದಿದೆ.
ಸೊರಬ ಮೂಲದ ಸಚಿನ್(27) ಕೊಲೆಗೀಡಾದ ದುರ್ದೈವಿಯಾಗಿದ್ದು, ಆಯನೂರಿನ ಬಾರ್ವೊಂದರಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ.
ಘಟನೆ ಹಿನ್ನೆಲೆ:
ಕಳೆದ ರಾತ್ರಿ ನಿರಂಜನ್, ಸತೀಶ್ ಹಾಗೂ ಆಶೋಕ್ ನಾಯ್ಕ್ ಎಂಬುವರು ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯದವರೆಗೂ ಮದ್ಯಪಾನ ಮಾಡುತ್ತಿದ್ದರು. ಈ ವೇಳೆ ಸಚಿನ್, ಬಾರ್ ಮುಚ್ಚುವ ಸಮಯ ಆಗಿದೆ ಹೊರಗೆ ಹೋಗಿ ಎಂದಿದ್ದಾನೆ, ಇದಕ್ಕೆ ಕೋಪಗೊಂಡ ಮೂವರು ಬಾರ್ನಲ್ಲಿಯೇ ಜಗಳಕ್ಕಿಳಿದಿದ್ದಾರೆ.
ಕೂಡಲೇ ಬಾರ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿಯನ್ನು ತಿಳಿಸಿದ್ದಾರೆ. ತಕ್ಷಣವೇ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದ್ದಾರೆ. ಈ ವೇಳೆ ಸಿಟ್ಟಿಗೆದ್ದ ಮೂವರು ಪೊಲೀಸರ ಎದುರಲ್ಲೇ ಸಚಿನ್ ಎದೆಯ ಭಾಗಕ್ಕೆ ಚಾಕುವಿನಿಂದ ಚುಚ್ಚಿದ್ದಾರೆ.
ಕೂಡಲೇ ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿಲಾಯಿತಾದರೂ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ರವಾನಿಸು ವೇಳೆ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಮೂವರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದು, ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್)