

ಬೆಂಗಳೂರು: ಪತ್ರಕರ್ತರು ಗೌರವದಿಂದ ಬದುಕಲು ಮತ್ತು ಸ್ವಂತ ಗೂಡುಕಟ್ಟಿಕೊಟ್ಟಲು ಅನುಕೂಲವಾಗುವಂತೆ ಸರ್ಕಾರಿ ಅಥವಾ ಖಾಸಗಿ ಲೇಔಟ್ಗಳಲ್ಲಿ ನಿವೇಶನ ಕಲ್ಪಿಸಲು ಸರ್ಕಾರ ಸದ್ಯದಲ್ಲೇ ಘೋಷಣೆ ಮಾಡಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು. ನಗರದ ಐಐಎಸ್ಸಿಯ ಟಾಟಾ ಸಭಾಂಗಣದಲ್ಲಿ ಸೋಮವಾರ ನಡೆದ 2023 ಮತ್ತು 2024ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಸರ್ಕಾರವು ಈಗಾಗಲೇ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಹಾಗೂ ಪತ್ರಕರ್ತರಿಗೆ ಆರೋಗ್ಯ ವಿಮೆ ನೀಡುವ ಯೋಜನೆ ರೂಪಿಸಿದೆ. ಹಾಗೆಯೇ ಗ್ರಾಮೀಣ ಮತ್ತು ನಗರ ಪತ್ರಕರ್ತರಿಗೂ ನಿವೇಶನ ನೀಡಲಾಗುವುದು ಎಂದರು.
ಕರ್ನಾಟಕದಲ್ಲಿದೆ ಪತ್ರಿಕಾ ಸ್ವಾತಂತ್ರ್ಯ: ಮಾಧ್ಯಮಗಳಿಗೆ ಕರ್ನಾಟಕದಲ್ಲಿ ಇರುವಷ್ಟು ಪತ್ರಿಕಾ ಸ್ವಾತಂತ್ರ್ಯ ದೇಶದ ಬೇರೆ ಯಾವುದೇ ರಾಜ್ಯಗಳಲ್ಲಿ ಇಲ್ಲ. ದಿನ ಬೆಳಗಾದರೆ ನೀವು ನಮಗೆ ಹೊಡೆಯುತ್ತಲೇ ಇರುತ್ತೀರಿ. ಟೀಕಿಸಿ ನಮ್ಮನ್ನು ಹಳ್ಳಕ್ಕೆ ಹಾಕುತ್ತಲೇ ಇರುತ್ತೀರಿ, ನಿಮಗೆ ಸಂತೋಷವಾದರೆ ನಮ್ಮನ್ನು ಮೇಲಕ್ಕೆ ಏರಿಸುತ್ತೀರಿ. ನಿಮ್ಮನ್ನು ಬಿಟ್ಟು ನಾವು ಬದುಕಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮ ನಾಲ್ಕನೇ ಅಂಗ. ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ತಪ್ಪು ಮಾಡಿದರೆ ತಿದ್ದುವ ಕೆಲಸವನ್ನು ಮಾಧ್ಯಮ ಮಾಡಲಿದೆ. ಸರ್ಕಾರ ಬದಲಿಸುವ, ನಾಯಕರನ್ನು ಬೆಳೆಸುವ ಶಕ್ತಿಯೂ ಮಾಧ್ಯಮಗಳಿಗಿದೆ. ಆದರೆ, ಸುಳ್ಳು ಸುದ್ದಿಗಳನ್ನು ಯಾವ ರೀತಿ ನಿಯಂತ್ರಿಸುತ್ತೀರಿ ಎಂಬುದನ್ನು ನೀವೇ ಯೋಚಿಸಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಪ್ರಶಸ್ತಿಗಳಿಗೆ ಮರುಜೀವ: ಹಿಂದಿನ ಸರ್ಕಾರ ಪ್ರತಿಷ್ಠಿತ ಟಿಎಸ್ಆರ್ ಪ್ರಶಸ್ತಿ, ಮೊಹರೆ ಹನುಮಂತರಾಯ ಪ್ರಶಸ್ತಿ, ಪರಿಸರ ಪತ್ರಿಕಾ ಪರಿಷತ್ ನೀಡುವ ಪ್ರಶಸ್ತಿಯನ್ನು ಅನೇಕ ವರ್ಷಗಳಿಂದ ನೀಡಿರಲಿಲ್ಲ. ಆ ಎಲ್ಲ ಪ್ರಶಸ್ತಿಗಳನ್ನು ನಮ್ಮ ಸರ್ಕಾರ ನೀಡುತ್ತಿದೆ. ಜತೆಗೆ ರಘುರಾಮ್ ಶೆಟ್ಟಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಕುರಿತು ಚರ್ಚೆ ನಡೆಯುತ್ತಿದೆ. ಬೆಲೆ ಏರಿಕೆ ಹಿನ್ನೆಲೆಯಲ್ಲಿ ಪ್ರಶಸ್ತಿ ಮೊತ್ತವನ್ನೂ ಹೆಚ್ಚಳ ಮಾಡಲು ಸರ್ಕಾರ ತೀರ್ವನಿಸಿದೆ ಎಂದು ಡಿಸಿಎಂ ಹೇಳಿದರು.
ವಿಜಯವಾಣಿ ಡಿಜಿಟಲ್ ಎಡಿಟರ್ ಸಿದ್ದು ಕಾಳೋಜಿ, ವಿಜಯವಾಣಿ ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕ ಪ್ರಕಾಶ್ ಎಸ್.ಶೇಟ್ ಹಾಗೂ ದಾವಣಗೆರೆ ಜಿಲ್ಲಾ ವಿಶೇಷ ವರದಿಗಾರ ರಮೇಶ್ ಜಹಗೀರದಾರ ಅವರಿಗೆ ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರದಾನ ಮಾಡಿದರು. ಇದೇ ವೇಳೆ 2023-24ನೇ ಸಾಲಿನಲ್ಲಿ ಕ್ರಮವಾಗಿ ಹಿರಿಯ ಪತ್ರಕರ್ತರಾದ ಅ.ಚ. ಶಿವಣ್ಣ ಮತ್ತು ಅಬ್ದುಸ್ಸಲಾಂ ಪುತ್ತಿಗೆ ಅವರಿಗೆ ಜೀವಮಾನ ಸಾಧನೆ ವಿಶೇಷ ಪ್ರಶಸ್ತಿ, ವಿವಿಧ ಮಾಧ್ಯಮಗಳ 60 ಮಂದಿಗೆ ವಾರ್ಷಿಕ ಪ್ರಶಸ್ತಿ ಮತ್ತು 20 ಮಂದಿಗೆ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಎಲ್ಲ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಶಸ್ತಿ ಮೊತ್ತವನ್ನು ಹೆಚ್ಚಳ ಮಾಡಲಾಗಿದೆ. ಜೀವಮಾನ ಸಾಧನೆ ಪ್ರಶಸ್ತಿ ಮೊತ್ತವನ್ನು 50 ಸಾವಿರ ರೂ.ಗಳಿಂದ ಒಂದು ಲಕ್ಷ ರೂ.ಗಳಿಗೆ, ವರ್ಷದ ವ್ಯಕ್ತಿ ಪ್ರಶಸ್ತಿಯನ್ನು 25 ಸಾವಿರ ರೂ.ಗಳಿಂದ 50 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. ದತ್ತಿ ಪ್ರಶಸ್ತಿ ಮೊತ್ತ ಹಿಂದಿನಂತೆಯೇ 10 ಸಾವಿರ ರೂ.ಗಳಿರಲಿದೆ.
ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಾತನಾಡಿ, ಪತ್ರಿಕಾ ವೃತ್ತಿಯ ಉಸಿರನ್ನು ಕಾಪಾಡಲು ಸಂವಿಧಾನ ಇದೆ. ನಮ್ಮ ಸಂವಿಧಾನ ಕರ್ತೃ ಡಾ.ಅಂಬೇಡ್ಕರ್ ಅವರೇ ಹೇಳಿರುವ ರೀತಿ ಪತ್ರಿಕಾವೃತ್ತಿ ನೈಜ ಪ್ರಾಣವಾಯು ಆಗಿ ಉಳಿಯಬೇಕು. ಈ ದಿಕ್ಕಿನಲ್ಲಿ ಮಾಧ್ಯಮ ಅಕಾಡೆಮಿ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ವಿನಂತಿಸಿದರು. ಸಿಎಂ ಕಾರ್ಯದರ್ಶಿ ಬಿ.ಬಿ.ಕಾವೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ಎಂ. ನಿಂಬಾಳ್ಕರ್, ಅಕಾಡೆಮಿ ಕಾರ್ಯದರ್ಶಿ ಸಹನಾ ಎಂ. ಮತ್ತು ಸದಸ್ಯ ಶಿವಾನಂದ ತಗಡೂರು ಸೇರಿ ಹಲವರು ಇದ್ದರು.
ಸುಳ್ಳು ಸುದ್ದಿಗಳು ಮತ್ತು ತಪ್ಪು ಮಾಹಿತಿಗಳನ್ನು ಬಿತ್ತರಿಸುವವರ ವಿರುದ್ಧ ಹೋರಾಟ ಮಾಡಬೇಕಿದೆ. ಇದು ಕೇವಲ ಸುದ್ದಿಮನೆಗಳ ದೃಷ್ಟಿಯಿಂದ ಮಾತ್ರವಲ್ಲದೆ, ಓದುಗರ ದೃಷ್ಟಿಯಿಂದಲೂ ಕಾರ್ಯನಿರ್ವಹಿಸಬೇಕಿದೆ. | ಆಯೇಷಾ ಖಾನಂ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ