

ಬೆಂಗಳೂರು: ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ದ್ವಿಚಕ್ರ ವಾಹನದ ಹಿಂಬದಿ ಸವಾರ ಮೃತಪಟ್ಟು, ಸವಾರ ಗಾಯಗೊಂಡಿದ್ದಾನೆ.
ಅಂಜನಾಪುರದ ರಾಜು ಹುಸೇನ್(೩೨) ಮೃತ ಹಿಂಬದಿ ಸವಾರ. ದಾದಾ ಪೀರ್ ಗಾಯಗೊಂಡಿರುವ ಸವಾರ. ಭಾನುವಾರ ರಾತ್ರಿ ೯.೧೫ ಅಂಜನಾಪುರದ ೮೦ ಅಡಿ ರಸ್ತೆಯ ಗುರು ಸಿದ್ದೇಶ್ವರ ಚಿತ್ರಮಂದಿರ ಬಳಿ ಈ ಅಪಘಾತ ಸಂಭವಿಸಿದೆ.
ಅಸ್ಸಾಂ ಮೂಲದ ಮೃತ ರಾಜು ಹುಸೇನ್ ಮತ್ತು ದಾದಾ ಪೀರ್ ಅಂಜನಾಪುರದ ವೆಲ್ಡಿಂಗ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ ಇಬ್ಬರು ಊಟ ಮಾಡಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆ ಕಡೆಗೆ ಬರುವಾಗ ಗುರು ಸಿದ್ದೇಶ್ವರ ಚಿತ್ರಮಂದಿರ ಬಳಿ ಎದುರಿನಿಂದ ವೇಗವಾಗಿ ಬಂದ ಕಾರು, ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಸವಾರರಿಬ್ಬರೂ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಹಿಂಬದಿ ಸವಾರ ರಾಜು ಹುಸೇನ್‌ಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸವಾರ ದಾದಾ ಪೀರ್‌ನನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಸದ್ಯ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕಾರು ಚಾಲಕನ ಅತಿವೇಗವೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೆಲ್ಮೆಟ್ ಧರಿಸಿದ್ದರೆ ರಾಜು ಹುಸೇನ್ ಬದುಕುವ ಸಾಧ್ಯತೆ ಇತ್ತು. ಆದರೆ, ಇಬ್ಬರೂ ಸವಾರರು ಹೆಲ್ಮೆಟ್ ಧರಿಸಿರಲಿಲ್ಲ. ಘಟನೆ ಸಂಬಂಧ ತಲಘಟ್ಟಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.