

ಬೆಂಗಳೂರು: ಉಲ್ಲಾಳು ರಸ್ತೆಯಲ್ಲಿ ಬೈಕ್ ಹಿಂದಿಕ್ಕುವ ಭರದಲ್ಲಿ ಹ್ಯಾಂಡಲ್‌ಗೆ ಕಾರು ತಾಗಿದ ಪರಿಣಾಮ ಅಪಘಾತ ಸಂಭವಿಸಿ ಮಹಿಳೆ ಸಾವನ್ನಪ್ಪಿದ್ದಾರೆ. ಗವಿಪುರದ ಬೃಂದಾವನಗರದ ನಿವಾಸಿ ವಸಂತಮ್ಮ (68) ಮೃತೆ. ಉಲ್ಲಾಳುನಲ್ಲಿದ್ದ 2ನೇ ಮಗನ ಮನೆಗೆ ಹಿರಿಯ ಮಗನ ಸತೀಶ್ ಜತೆ ಬುಧವಾರ ಬೆಳಗ್ಗೆ 8 ಗಂಟೆಗೆ ವಸಂತಮ್ಮ ತೆರಳುವಾಗ ದುರ್ಘಟನೆ ನಡೆದಿದೆ.
ಸತೀಶ್, ತನ್ನ ಬೈಕ್‌ನಲ್ಲಿ ತಾಯಿ ವಸಂತಮ್ಮನನ್ನು ಕೂರಿಸಿಕೊಂಡು ಮೈಸೂರು ರಸ್ತೆ ಕಡೆಯಿಂದ ಜ್ಞಾನಭಾರತಿ ಮುಖ್ಯ ರಸ್ತೆಯಲ್ಲಿ ಉಲ್ಲಾಳು ಜಂಕ್ಷನ್‌ಗೆ ತೆರಳುತ್ತಿದ್ದರು. ಅದೇ ಮಾರ್ಗದಲ್ಲಿ ಹಿಂದಿನಿಂದ ಬಂದ ಕಾರ್, ಓವರ್ ಟೇಕ್ ಮಾಡುವ ಭರದಲ್ಲಿ ಬೈಕ್ ಹ್ಯಾಂಡಲ್‌ಗೆ ತಾಕಿತು. ಸವಾರನ ನಿಯಂತ್ರಣ ತಪ್ಪಿ ಬಿದ್ದಾಗ ಹಿಂಬದಿಯಲ್ಲಿ ಕುಳಿತಿದ್ದ ವಸಂತಮ್ಮ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ಕೆಂಗೇರಿ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ಅಪಘಾತದಲ್ಲಿ ಚಿಕ್ಕಲ್ಲಸಂದ್ರ ನಿವಾಸಿ ಧನುಷ್ (23) ಎಂಬುವರು ಮೃತಪಟ್ಟಿದ್ದಾರೆ ಆರ್.ಆರ್. ನಗರ ಆರ್ಚ್ ಕಡೆಯಿಂದ ಉತ್ತರಹಳ್ಳಿ ಕಡೆಗೆ ಬುಧವಾರ ನಸುಕಿನಲ್ಲಿ ಧನುಷ್ ತೆರಳುವಾಗ ಅವಘಡ ಸಂಭವಿಸಿದೆ. ಬಿಕಾಂ ಪದವೀಧರ ಧನುಷ್, ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದ. ತನ್ನ ಸ್ನೇಹಿತರ ಜತೆ ಹೋಟೆಲ್‌ನಲ್ಲಿ ಊಟ ಮುಗಿಸಿಕೊಂಡು ಮನೆಗೆ ತೆರಳುವಾಗ ದುರಂತ ಸಂಭವಿಸಿದೆ ಎಂದು ಕೆಂಗೇರಿ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.