

ಚಿಕ್ಕೋಡಿ: ಐದು ತಿಂಗಳ ಹಸುಗೂಸಿನ ಜತೆ ಬೈಕ್ನಲ್ಲಿ ಹೊರಟಿದ್ದ ದಂಪತಿ ಮಾರ್ಗಮಧ್ಯೆ ಮಗು ಸಮೇತ ದುರ್ಮರಣಕ್ಕೀಡಾದ ಘಟನೆ ಗೋಕಾಕ ತಾಲೂಕಿನ ಸಂಗನಕೇರಿ ಗ್ರಾಮದ ಬಳಿ ಸಂಭವಿಸಿದೆ.
ಸದಾಶಿವ ಗಾಣಗೇರ(35), ಇವರ ಪತ್ನಿ ಸಕ್ಕುಬಾಯಿ ಗಾಣಗೇರ(31) ಮತ್ತು 5 ತಿಂಗಳ ಹೆಣ್ಣುಮಗು ಸೃಷ್ಠಿ ಮೃತ ದುರ್ದೈವಿಗಳು. ಮೃತರು ರಾಯಭಾಗ ತಾಲೂಕಿನ ಹಿಡಕಲ್ ಗ್ರಾಮದ ನಿವಾಸಿಗಳು.
ಶನಿವಾರ ಹುಕ್ಕೇರಿಯಿಂದ ಸ್ವಗ್ರಾಮ ರಾಯಭಾಗ ತಾಲೂಕಿನ ಹಿಡಕಲ್ಗೆ ಬೈಕ್ನಲ್ಲಿ ಮೂವರೂ ಹೊರಟಿದ್ದರು. ಗೋಕಾಕ ತಾಲೂಕಿನ ಸಂಗನಕೇರಿ ಬಳಿ ಕಬ್ಬು ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್ ಮತ್ತು ಬೈಕ್ ಅಪಘಾತಕ್ಕೀಡಾಗಿದ್ದು, ಸ್ಥಳದಲ್ಲೇ ಅಪ್ಪ-ಅಮ್ಮ-ಮಗು ಮೃತಪಟ್ಟಿದ್ದಾರೆ.
ಅಪಘಾತದ ಭೀಕರತೆ ಕಂಡ ದಾರಿಹೋಕರು ಮತ್ತು ಸ್ಥಳೀಯರು ಬೆಚ್ಚಿಬಿದ್ದಿದ್ದು, ವಿಧಿಯಾಟಕ್ಕೆ ಹಿಡಿಶಾಪ ಹಾಕಿದ್ದಾರೆ. ಘಟಪ್ರಭಾ ಪೊಲೀಸರು ಸ್ಥಳ ಪರಿಶೀಲಿಸಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಘಟಪ್ರಭಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.