

ಕಾನ್ಪುರ: ಇತ್ತೀಚಿನ ದಿನಗಳಲ್ಲಿ ರೈಲು ಸಂಬಂಧಿತ ಅವಘಡಗಳಿ ಹೆಚ್ಚಾಗುತ್ತಿದ್ದು, ಇದೀಗ ಕಿಡಿಗೇಡಿಗಳು ರೈಲ್ವೆ ಹಳಿ ಮೇಲೆ ಗ್ಯಾಸ್ ಸಿಲಿಂಡರ್ ಇಟ್ಟು ಟ್ರೈನ್ಅನ್ನು ಉರುಳಿಸುವ ಸಂಚು ನಡೆದಿದ್ದು, ಲೋಕೋಪೈಲಟ್ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ.
ದೆಹಲಿ-ಹೌರಾ ಮಾರ್ಗದ ಪ್ರೇಮ್‌ಪುರ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಮುಂಜಾನೆ 5:55ರ ಸುಮಾರಿಗೆ ಈ ಘಟನೆ ನಡೆದಿದೆ. ಲೋಕೋ ಪೈಲಟ್ ಮತ್ತು ಸಹಾಯಕ ಲೋಕೋ ಪೈಲಟ್ ತುರ್ತು ಬ್ರೇಕ್ ಮೂಲಕ ಗೂಡ್ಸ್ ರೈಲನ್ನು ನಿಲ್ಲಿಸುವ ಮೂಲಕ ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಸರಕು ರೈಲು ಕಾನ್ಪುರದಿಂದ ಪ್ರಯಾಗ್‌ರಾಜ್‌ಗೆ ಲೂಪ್ ಲೈನ್ ಮೂಲಕ ಪ್ರಯಾಣಿಸುತ್ತಿತ್ತು. ಸುಮಾರು 5:55ರ ಸುಮಾರಿಗೆ 5 ಕೆಜಿ ಖಾಲಿ ಸಿಲಿಂಡರ್ಅನ್ನು ಕಿಡಿಗೇಡಿಗಳು ಹಳಿಗಳ ಮೇಲೆ ಇರಿಸಿ ಪರಾರಿಯಾಗಿದ್ದಾರೆ. ಲೋಕೋ ಪೈಲಟ್ ಮತ್ತು ಸಹಾಯಕ ಪೈಲಟ್ ಎಚ್ಚರಿಕೆಯಿಂದಾಗಿ ರೈಲನ್ನು ಉರುಳಿಸುವ ಸಂಚು ವಿಫಲವಾಗಿದೆ. ಈ ಘಟನೆ ಕುರಿತು ರೈಲ್ವೆ ಇಲಾಖೆ ತನಿಖೆಗೆ ಆದೇಶಿಸಿದ್ದು, ಆದಷ್ಟು ಬೇಗ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
ಇಂತಹ ಷಡ್ಯಂತ್ರ ಬಯಲಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ತಿಂಗಳಷ್ಟೇ, ಕಾನ್ಪುರದಲ್ಲಿ ಎರಡು ಬಾರಿ ರೈಲು ಅಪಘಾತವನ್ನು ತಪ್ಪಿಸಲಾಗಿದೆ. ಒಮ್ಮೆ ಟ್ರ್ಯಾಕ್ ಮೇಲೆ ಟ್ರಕ್ ಪಲ್ಟಿಯಾಗಿತ್ತು. ಕಳೆದ ತಿಂಗಳು, ಹಳಿ ಮೇಲೆ ಬಂಡೆಯನ್ನು ಇರಿಸಲಾಗಿತ್ತು, ನಂತರ ರೈಲಿನ 22 ಬೋಗಿಗಳು ಹಳಿತಪ್ಪಿದವು. ಈ ಅವಘಡವೂ ರಾತ್ರಿ ವೇಳೆ ಸಂಭವಿಸಿದೆ. ಆದರೆ, ಈ ಅವಘಡದಲ್ಲಿ ಯಾವುದೇ ಅವಘಡ ಸಂಭವಿಸಿರಲಿಲ್ಲ.