

ಕಡೂರು: ಪ್ರಾಯೋಜಕರು ಮತ್ತು ಆಯೋಜಕರಿಂದ ತಾಲೂಕಿನಲ್ಲಿ ನಡೆದ ಪ್ರತಿಭಾ ಕಾರಂಜಿ ಮತ್ತು ಕ್ರೀಡಾಕೂಟಗಳು ಯಶಸ್ವಿಯಾಗಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಸಿದ್ದರಾಜನಾಯ್ಕ ಹೇಳಿದರು.
ಆಣೇಗೆರೆ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪಂಚನಹಳ್ಳಿ ಹಾಗೂ ಸಿಂಗಟಗೆರೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿ, ತೀರ್ಪುಗಾರರು ನ್ಯಾಯ ಸಮ್ಮತ ತೀರ್ಪು ನೀಡಿದ್ದರಿಂದ ಒಂದೂವರೆ ತಿಂಗಳಿನಿಂದ ತಾಲೂಕಿನಾದ್ಯಂತ ನಡೆದ ಪ್ರತಿಭಾ ಕಾರಂಜಿ ಮತ್ತು ಕ್ರೀಡಾಕೂಟಗಳು ಗೊಂದಲವಿಲ್ಲದೆ ಮುಕ್ತಾಯಗೊಂಡಿವೆ. ಸ್ಪರ್ಧೆಯಲ್ಲಿ ಒಬ್ಬರು ಗೆದ್ದರೆ ಮತ್ತೊಬ್ಬರು ಸೋಲಲೇ ಬೇಕು. ಸ್ಪರ್ಧೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಮುಖ್ಯ. ಮಕ್ಕಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಅರೇಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿ, ದೈಹಿಕವಾಗಿ ಸದೃಢವಾಗಿರುವವರ ಮನಸ್ಸು ನಿಶ್ಚಲವಾಗಿರುತ್ತದೆ. ಇದು ಸಾಧನೆಗೆ ಸಹಕಾರಿಯಾಗುತ್ತದೆ. ಆದ್ದರಿಂದ ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸಬೇಕು ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಿ.ಪಿ.ಲಿಂಗರಾಜು ಮಾತನಾಡಿ, ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳು ಅಗತ್ಯ. ಸೋಲು ಗೆಲುವಿಗೆ ಹೆಚ್ಚಿನ ಮಹತ್ವ ನೀಡದೆ ಕ್ರೀಡೆಯ ಹಿರಿಮೆ ಹೆಚ್ಚಿಸುವತ್ತ ವಿದ್ಯಾರ್ಥಿಗಳು ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.
ಆಣೇಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಎ.ಆರ್.ಪ್ರಕಾಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ ಶಿವಣ್ಣ, ಬಿಆರ್‌ಸಿ ಬಿ.ಟಿ.ಪ್ರೇಮ್‌ಕುಮಾರ್, ಮುಖ್ಯಶಿಕ್ಷಕ ಭೈರಲಿಂಗೇಗೌಡ, ಆನಂದ್, ರಾಜಪ್ಪ, ದಿನೇಶ್, ಕುಮಾರ್, ಪಿ.ಗೀತಾ, ರಂಗನಾಥ ಸ್ವಾಮಿ, ಶೋಭಾ ಮತ್ತಿತರರಿದ್ದರು.