

ದೇಶದಲ್ಲಿ ಚಿಲ್ಲರೆ ಹಣದುಬ್ಬರವನ್ನು ಶೇಕಡ 4ರ ಮಿತಿಯಲ್ಲಿ ಕಾಯ್ದುಕೊಂಡು ಬೆಲೆಯಲ್ಲಿ ಸ್ಥಿರತೆ ಕಾಪಾಡುವ ಉದ್ದೇಶದಿಂದ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ನ ಹಣಕಾಸು ನೀತಿ ಸಮಿತಿ ಶುಕ್ರವಾರ ನಿರ್ಧರಿಸಿದೆ. ಈಗಿರುವ ಶೇಕಡ 6.5 ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಹಾಗಾಗಿ, ಸಾಲದ ಇಎಂಐಗಳು ಯಥಾಸ್ಥಿತಿಯಲ್ಲಿ ಮುಂದುವರಿಯುತ್ತವೆ. ಸತತ ಏಳನೇ ಬಾರಿ ಪ್ರಮುಖ ಸಾಲದ ದರ ಯಥಾಸ್ಥಿಯಲ್ಲಿರುವುದು ಗಮನಾರ್ಹ.
‘ಫೆಬ್ರವರಿಯಲ್ಲಿ ಆಹಾರ ಹಣದುಬ್ಬರ ಉಂಟಾಗಿದ್ದರೂ, ಆಹಾರ ಮತ್ತು ಇಂಧನವನ್ನು ಹೊರತುಪಡಿಸಿ ಪ್ರಮುಖ ಹಣದುಬ್ಬರವು ಇಳಿಕೆ ಸ್ಥಿತಿಯಲ್ಲೇ ಇದೆ. ಆದರೂ, ಹಣದುಬ್ಬರ ಮತ್ತು ಆರ್ಥಿಕ ಸ್ಥಿರತೆಯ ಮೇಲೆ ಹವಾಮಾನ ಏರಿಳಿತಗಳ ಸಂಭಾವ್ಯ ಪ್ರಭಾವದ ಬಗ್ಗೆ ಆತಂಕ ಇದ್ದೇ ಇರುತ್ತದೆ’ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಶೇ.7ರಷ್ಟು ಇರಲಿದ್ದು, ಆರ್ಥಿಕ ಬೆಳವಣಿಗೆಯ ಪ್ರಸಕ್ತ ವೇಗ ಮುಂದುವರಿಯುವ ಬಗ್ಗೆ ಹಣಕಾಸು ನೀತಿ ಸಮಿತಿ ಆಶಾವಾದ ವ್ಯಕ್ತಪಡಿಸಿದೆ. ಅಲ್ಲದೆ, ಯುಪಿಐ ಬಳಕೆಯ ಮೂಲಕ ಬ್ಯಾಂಕ್ಗಳಲ್ಲಿ ನಗದು ಠೇವಣಿ ಸೌಲಭ್ಯವನ್ನು ಶೀಘ್ರದಲ್ಲೇ ಆರಂಭಿಸುವುದಾಗಿ ಆರ್ಬಿಐ ಹೇಳಿದೆ. ನಗದು ಠೇವಣಿ ಸೌಲಭ್ಯವು ಪ್ರಸ್ತುತ ಡೆಬಿಟ್ ಕಾರ್ಡ್ಗಳ ಮೂಲಕ ಮಾತ್ರ ಲಭ್ಯವಿದೆ. ಯುಪಿಐ ಜನಪ್ರಿಯತೆ ಗಮನದಲ್ಲಿಟ್ಟುಕೊಂಡು ಹೊಸ ಸೌಲಭ್ಯ ನೀಡಲು ಕ್ರಮ ಕೈಗೊಳ್ಳಲಾಗುತ್ತಿರುವುದರಿಂದ ಜನಸಾಮಾನ್ಯರಿಗೆ ಅನುಕೂಲವಾಗಲಿದೆ.
ಮತ್ತೊಂದೆಡೆ, ಹೊಸ ಮನೆಗಳಿಗೆ ಬೇಡಿಕೆ ಹೆಚ್ಚಿರುವುದರಿಂದ, ಗೃಹ ಸಾಲ ಕ್ಷೇತ್ರಕ್ಕೆ ಸಂಬಂಧಿಸಿದ ಚಟುವಟಿಕೆಗಳು ಗರಿಗೆದರಿವೆ. 2022ರ ಮಾರ್ಚ್ನಿಂದ 2023ರ ಡಿಸೆಂಬರ್ನ ಅವಧಿಯಲ್ಲಿ ದೇಶದಲ್ಲಿ ಗೃಹ ಸಾಲ ಪಡೆಯುವವರ ಪ್ರಮಾಣ ಶೇಕಡ 34ರಷ್ಟು ಹೆಚ್ಚಿದೆ ಎಂದು ಬ್ಯಾಂಕ್ ಆಫ್ ಬರೋಡಾದ ಕ್ರೆಡಿಟ್ ರಿಪೋರ್ಟ್ ಹೇಳಿದೆ. ದೇಶದ ಮಹಾನಗರಗಳಲ್ಲಿ ಹೊಸ ಮನೆ ಕೊಳ್ಳುವವರ ಸಂಖ್ಯೆ ಹೆಚ್ಚಿದ್ದು, 50 ಲಕ್ಷರೂ.ವರೆಗಿನ ಗೃಹ ಸಾಲ ಪಡೆಯುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗಿಂತ ಜನರು ಗೃಹ ಸಾಲಕ್ಕಾಗಿ ಖಾಸಗಿ ಬ್ಯಾಂಕುಗಳನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ.
ಗೃಹ ಸಾಲ ಮಾತ್ರವಲ್ಲದೆ, ವಾಹನ ಸಾಲ ಪ್ರಮಾಣದಲ್ಲೂ ಏರಿಕೆ ಕಂಡುಬಂದಿದೆ. ‘ಇದು ಜನರ ಕೊಳ್ಳುವ ಸಾಮರ್ಥ್ಯ ಹೆಚ್ಚುತ್ತಿರುವ ಪ್ರತೀಕವಾಗಿದ್ದು, ಹೊಸದಾಗಿ ಉದ್ಯೋಗಕ್ಕೆ ಸೇರಿದ ಯುವಕರು ಮತ್ತು 35 ವರ್ಷದೊಳಗಿನ ಉದ್ಯೋಗಿಗಳು ಭವಿಷ್ಯದ ಹಿತದೃಷ್ಟಿಯಿಂದ ಮನೆ ಖರೀದಿಯಲ್ಲಿ ಹಣ ಹೂಡಿಕೆ ಮಾಡುತ್ತಿದ್ದಾರೆ. ಈ ಬೆಳವಣಿಗೆ ಸಣ್ಣ ನಗರ ಮತ್ತು ಮಹಾನಗರಗಳಲ್ಲೂ ಕಂಡುಬರುತ್ತಿದೆ’ ಎಂಬುದು ತಜ್ಞರ ಅಭಿಪ್ರಾಯ. ಪ್ರಸಕ್ತ, ರೆಪೊ ದರ ಯಥಾಸ್ಥಿತಿಯಲ್ಲಿ ಇರುವುದರಿಂದ ಮನೆ ಖರೀದಿದಾರರಿಗೆ ಅನುಕೂಲವೇ ಆಗಲಿದೆ. ಮಾಸಿಕ ಕಂತುಗಳಲ್ಲಿ ಯಾವುದೇ ಬದಲಾವಣೆ ಇಲ್ಲದಿರುವುದರಿಂದ ಸ್ವಾಭಾವಿಕವಾಗಿಯೇ ಜನರಲ್ಲಿ ಮನೆ ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಮುಂದಿನ ದಿನಗಳಲ್ಲಿ ಬಡ್ಡಿ ದರ ಕಡಿತವಾಗುವ ಸಾಧ್ಯತೆಯೂ ಇದೆ. ಒಟ್ಟಾರೆ, ಆರ್ಥಿಕ ಚಟುವಟಿಕೆಗಳಿಗೆ ವೇಗ ಸಿಗುತ್ತಿದ್ದು, ಹಣದುಬ್ಬರ ಇನ್ನಷ್ಟು ನಿಯಂತ್ರಣಕ್ಕೆ ಬಂದರೆ ಶ್ರೀಸಾಮಾನ್ಯ ನೆಮ್ಮದಿಯ ನಿಟ್ಟುಸಿರು ಬಿಡಬಹುದು.