

ಹೈದರಾಬಾದ್: ತೆಲಂಗಾಣದ ಕೇಸರ ಮಂಡಲದ ತಹಸೀಲ್ದಾರ್ ಎರ್ವ ಬಾಲರಾಜ್ ನಾಗರಾಜು ವಿರುದ್ಧ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಎಸಿಬಿ ತಹಸೀಲ್ದಾರ್ ಬ್ಯಾಂಕ್ ಲಾಕರ್ನಲ್ಲಿ 57.6 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಆಗಸ್ಟ್ 14ರಂದು ಎಸಿಬಿ ಅಧಿಕಾರಿಗಳ ಎ.ಎಸ್. ರಾವ್ ನಗರದಲ್ಲಿರುವ ತಹಸೀಲ್ದಾರ್ ಗೆಸ್ಟ್ ಹೌಸ್ ಮೇಲೆ ದಾಳಿ ಮಾಡಿ, ಇಬ್ಬರು ರಿಯಲ್ ಎಸ್ಟೇಟ್ ಡೀಲರ್ಗಳಿಂದ ತಹಸೀಲ್ದಾರ್ ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ಇದು ಇತ್ತೀಚೆಗೆ ನಡೆದ ಬಹುದೊಡ್ಡ ದಾಳಿ ಆಗಿತ್ತು. ಈ ವೇಳೆ ತಹಸೀಲ್ದಾರ್ ಗೆಸ್ಟ್ಹೌಸ್ನಲ್ಲಿ 1 ಕೋಟಿ 10 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿತ್ತು. ಅಲ್ಲದೆ, ಕಾರಿನಲ್ಲಿ 8 ಲಕ್ಷ ರೂ. ಸೀಜ್ ಮಾಡಲಾಗಿತ್ತು.
ಇದಲ್ಲದೆ ಮನೆಯನ್ನು ಹುಡುಕಾಡಿದಾಗ ಹೆಚ್ಚುವರಿಯಾಗಿ 27 ಲಕ್ಷ ರೂ. ಹಣ ಮತ್ತೆ ಪತ್ತೆಯಾಗಿತ್ತು. ತಹಸೀಲ್ದಾರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಎಸಿಬಿ ತನ್ನ ದಾಳಿಯನ್ನು ಮುಂದುವರಿಸಿತು. ಇದರ ಭಾಗವಾಗಿ ಇಂದು ತಹಸೀಲ್ದಾರ್ಗೆ ಸಂಬಂಧಿಸಿದ ಬ್ಯಾಂಕ್ ಲಾಕರ್ ಅನ್ನು ಓಪನ್ ಮಾಡಿದಾಗ ಬರೋಬ್ಬರಿ 57.6 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. ಲಾಕರ್ ತಹಸೀಲ್ದಾರ್ ಸಂಬಂಧಿ ಜಿ.ಜೆ. ನರೇಂದರ್ ಹೆಸರಿನಲ್ಲಿತ್ತು.
ಈಗಾಗಲೇ ತಹಸೀಲ್ದಾರ್ ಬಂಧಿಯಾಗಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ. ಕೇಸರ ಮಂಡಲದ ದಯಾರಾ ಗ್ರಾಮದ ವ್ಯಾಪ್ತಿಯಲ್ಲಿ ಬರುವ 28 ಎಕರೆ ಜಮೀನು ವಿವಾದದಲ್ಲಿತ್ತು. ಗ್ರಾಮದ ಕೆಲವರು ಕೋರ್ಟಿನಲ್ಲಿ ದಾವೆ ಹೂಡಿ ತಮ್ಮ ಪರವಾಗಿ ಮಾಡಿಕೊಂಡಿದ್ದರು. ಆದಾಗ್ಯೂ, ರಿಯಲ್ ಎಸ್ಟೇಟ್ ಡೀಲರ್ಗಳ ಪರವಾಗಿ ಜಮೀನು ಮಾಡಿಕೊಡುವುದಾಗಿ ಹೇಳಿ ಅವರಿಗೆ ತಹಸೀಲ್ದಾರ್ 2 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು. ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. (ಏಜೆನ್ಸೀಸ್)