

ಬೆಂಗಳೂರು: ಹೈಕೋರ್ಟ್ ಆದೇಶದ ಮೇರೆಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಯನ್ನು ಅಧಿಕೃತವಾಗಿ ರದ್ದು ಪಡಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಇದೇ ವೇಳೆ ಎಸಿಬಿ ತನಿಖೆ ನಡೆಸುತ್ತಿದ್ದ ಭ್ರಷ್ಟಾಚಾರ ಆರೋಪ ಪ್ರಕರಣಗಳನ್ನು ಲೋಕಾಯುಕ್ತ ಸಂಸ್ಥೆಗೆ ವರ್ಗಾವಣೆ ಮಾಡಿದೆ.
1991 ಮತ್ತು 2002ರಲ್ಲಿ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಭ್ರಷ್ಟಾಚಾರ ತಡೆ ಕಾಯ್ದೆ ಅಧಿಕಾರ ವಹಿಸಲಾಗಿತ್ತು. ತನಿಖಾಧಿಕಾರವನ್ನು ಮತ್ತು ದಂಡ ಪ್ರಕ್ರಿಯೇ ಮೇಲೆ ಎ್ಐಆರ್ ಮಾಡುವ ಅಧಿಕಾರ ನೀಡಿ ಸರ್ಕಾರ ಆದೇಶಿಸಿತ್ತು. ಇದಾದ ಮೇಲೆ 2016ರ ಮಾರ್ಚ್ 30ರಂದು ಭ್ರಷ್ಟಾಚಾರ ನಿಗ್ರಹ ದಳವನ್ನು ರಚನೆ ಮಾಡಿ ಭ್ರಷ್ಟಾಚಾರ ತಡೆ ಕಾಯ್ದೆ ಅಧಿಕಾರವನ್ನು ಎಸಿಬಿ ಪೊಲೀಸರಿಗೆ ವಹಿಸಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್, ಆ.11ರಂದು ಎಸಿಬಿ ರಚನೆ ಮಾಡಿದ್ದ ಅಧಿಸೂಚನೆಯನ್ನೇ ರದ್ದು ಮಾಡಿ ಎಲ್ಲ ಪ್ರಕರಣಗಳನ್ನು ಲೋಕಾಯುಕ್ತ ಸಂಸ್ಥೆಗೆ ವರ್ಗಾವಣೆ ಮಾಡುವಂತೆ ತೀರ್ಪು ನೀಡಲಾಗಿತ್ತು. ಇದನ್ನು ಒಪ್ಪಿಕೊಂಡ ರಾಜ್ಯ ಸರ್ಕಾರ, ಎಸಿಬಿ ಪೊಲೀಸರಿಗೆ ವಹಿಸಿದ್ದ ಅಧಿಕಾರವನ್ನು ರದ್ದು ಮಾಡಿದೆ. ಪೊಲೀಸ್ ಠಾಣೆಯನ್ನು ಹಿಂಪಡೆದು ಎಸಿಬಿ ಬಳಿ ಬಾಕಿ ಇರುವ ಎಲ್ಲ ಪ್ರಕರಣಗಳನ್ನು ಲೋಕಾಯುಕ್ತ ಸಂಸ್ಥೆಗೆ ವರ್ಗಾವಣೆ ಮಾಡಿ ಸರ್ಕಾರ ಶುಕ್ರವಾರ ಆದೇಶ ಮಾಡಿದೆ.