ಎನ್‌ಇಪಿ ರದ್ದುಗೊಳಿಸದಂತೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

abvp
ಎನ್‌ಇಪಿ ರದ್ದುಗೊಳಿಸದಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಪ್ರೇಮಶ್ರೀ ಜೋಡಿದಾರ್, ರವಿ, ಯಶಸ್ವಿನಿ, ಶರಣ್, ಯಶವಂತ, ವಿಧಾತ್ರಿ, ರಘು ಇತರರಿದ್ದರು.
Published on

ಶಿವಮೊಗ್ಗ: ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಪಡಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ತಜ್ಞರೊಂದಿಗೆ ಚರ್ಚಿಸಿ ಕೇಂದ್ರ ಸರ್ಕಾರ ರೂಪಿಸಿರುವ ಶಿಕ್ಷಣ ನೀತಿ ರದ್ದು ಮಾಡಲು ತೀರ್ಮಾನಿಸಿರುವುದು ರಾಜಕೀಯ ಪ್ರೇರಿತ ಕ್ರಮ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಸ್ತುತ ನಮ್ಮ ಶಿಕ್ಷಣ ಪದ್ಧತಿ ಬ್ರಿಟಿಷ್ ವಸಾಹತು ವ್ಯವಸ್ಥೆಯ ಮುಂದುವರಿದ ಭಾಗವಾಗಿದೆ. ಇದು ಗುಲಾಮಗಿರಿಯ ಮಾನಸಿಕತೆಯೂ ಹೌದು. ನಮ್ಮ ಭವ್ಯ ಇತಿಹಾಸವನ್ನು ಮರೆಮಾಚಿ ವಿದ್ಯಾರ್ಥಿಗಳಿಗೆ ದೇಶದ ಬಗ್ಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ. ಇದೆಲ್ಲದಕ್ಕೂ ರಾಷ್ಟ್ರೀಯ ಶಿಕ್ಷಣ ನೀತಿ ಪರಿಹಾರವಾಗಿತ್ತು ಎಂದು ವಿದ್ಯಾರ್ಥಿಗಳು ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಸಿಕೊಂಡ ಮೊದಲ ರಾಜ್ಯ ನಮ್ಮದಾಗಿತ್ತು. ಆದರೆ ಸರ್ಕಾರ ಬದಲಾಗುತ್ತಿದ್ದಂತೆಯೇ ಎನ್‌ಇಪಿಗೆ ಆತಂಕ ಎದುರಾಗಿದೆ. ಎನ್‌ಇಪಿ ಬಗ್ಗೆ ಚರ್ಚೆಗೆ ಅವಕಾಶ ನೀಡಿದ್ದಾಗ ಅದರ ವಿರುದ್ಧ ದನಿ ಎತ್ತದವರು ಈಗ ರದ್ದತಿಗೆ ಮುಂದಾಗಿರುವುದು ಹಾಸ್ಯಾಸ್ಪದ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಎನ್‌ಇಪಿ ಮೂಲಕ ಮೊದಲ ಬಾರಿಗೆ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ವ್ಯವಸ್ಥೆ ರೂಪಿಸಲಾಗಿದೆ. ಬಹುಶಿಸ್ತಿನ ಅಧ್ಯಯನಕ್ಕೆ, ಕೌಶಲಯುತ ಶಿಕ್ಷಣಕ್ಕೆ, ಬಹುಭಾಷಿಕ ಹಾಗೂ ಸಾಂಸ್ಕೃತಿಕ ಬಹುತ್ವಕ್ಕೆ ಒತ್ತು ನೀಡಲಾಗಿದೆ. ಆದರೆ ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾದ ತೀರ್ಮಾನ ಕೈಗೊಳ್ಳುತ್ತಿದೆ ಎಂದು ದೂರಿದರು.
ಎನ್‌ಇಪಿ ರದ್ದತಿ ರಾಜಕೀಯ ಸೇಡು ತೀರಿಸಿಕೊಳ್ಳುವ ಅಸ್ತ್ರವಾಗಿದೆ. ಚುನಾವಣಾ ಪ್ರಣಾಳಿಕೆಯಲ್ಲೇ ಎನ್‌ಇಪಿ ರದ್ದತಿ ಬಗ್ಗೆ ಉಲ್ಲೇಖಿಸುವಾಗ ಯಾವ ತಜ್ಞರಿಂದ ಮಾಹಿತಿ ಪಡೆದಿದ್ದರು? ಮುಂದೆ ಎನ್‌ಇಪಿ ಆಧಾರದಲ್ಲೇ ಐಐಟಿ, ಐಐಎಂ, ಯುಪಿಎಸ್‌ಸಿ ಮುಂತಾದವುಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದರೆ ಕರ್ನಾಟಕದ ವಿದ್ಯಾರ್ಥಿಗಳ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ಎನ್‌ಇಪಿ ಬಗ್ಗೆ ವಿಮರ್ಶೆ ನಡೆಸಬೇಕು. ಒಂದು ವೇಳೆ ಸಣ್ಣ ಪುಟ್ಟ ನ್ಯೂನತೆಗಳಿದ್ದರೆ ಅದನ್ನು ಸರಿಪಡಿಸಬೇಕು. ಆದರೆ ಯಾವುದೇ ಕಾರಣಕ್ಕೂ ರಾಷ್ಟ್ರೀಯ ಶಿಕ್ಷಣ ನೀತಿ ರದ್ದು ಮಾಡಿ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲಿಗೆ ತಳ್ಳಬಾರದು ಎಂದು ಆಗ್ರಹಿಸಿದರು.
ಎಬಿವಿಪಿ ರಾಜ್ಯ ಕಾರ್ದರ್ಶಿ ಪ್ರೇಮಶ್ರೀ ಜೋಡಿದಾರ್, ಪ್ರಮುಖರಾದ ರವಿ, ಯಶಸ್ವಿನಿ, ಶರಣ್, ಯಶವಂತ, ವಿಧಾತ್ರಿ, ರಘು ಮುಂತಾದವರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net