

ಶಿವಮೊಗ್ಗ: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹಿಂಪಡೆಯಲು ನಿರ್ಧರಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬ್ರಿಟಿಷ್ ಶಿಕ್ಷಣ ಪದ್ಧತಿಯಿಂದ ನಮ್ಮ ಶಿಕ್ಷಣ ವ್ಯವಸ್ಥೆ ಮುಕ್ತವಾಗಬೇಕು. ನಮ್ಮ ವಿದ್ಯಾರ್ಥಿಗಳು ಕೌಶಲ ರೂಢಿಸಿಕೊಳ್ಳಬೇಕು ಎಂಬ ಕಾರಣದಿಂದ 2020ರಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಿತ್ತು. ಅದನ್ನು ಅನುಷ್ಠಾನಗೊಳಿಸಿದ ಮೊದಲ ರಾಜ್ಯ ಕರ್ನಾಟಕವಾಗಿತ್ತು. ಆದರೆ ಈಗ ರಾಜ್ಯದಲ್ಲಿನೀತಿಯನ್ನು ಹಿಂಪಡೆಯಲು ಹುನ್ನಾರ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶವ್ಯಾಪಿ ಏಕರೂಪ ಶಿಕ್ಷಣ ವ್ಯವಸ್ಥೆಯಿರಬೇಕು. ಮುಂದಿನ 25-30 ವರ್ಷಗಳಿಗೆ ನಮ್ಮ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ರೂಪುಗೊಂಡಿರುವುದು ರಾಷ್ಟ್ರೀಯ ಶಿಕ್ಷಣ ನೀತಿ. ಆದರೆ ಈಗ ರಾಜಕೀಯ ಕಾರಣಕ್ಕಾಗಿ ಶಿಕ್ಷಣ ನೀತಿ ಹಿಂಪಡೆಯಲಾಗುತ್ತಿದೆ ಎಂದು ದೂರಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದ ಪರಿಣಾಮ ನಮ್ಮ ರಾಜ್ಯದ ಅನೇಕ ವಿವಿಗಳಿಗೆ ಪಿಎಂ ಉಷಾ ಯೋಜನೆಯಡಿ ಕೇಂದ್ರ ಸರ್ಕಾರ ಕೋಟ್ಯಂತರ ರೂ. ಅನುದಾನ ನೀಡಿತ್ತು. ಒಂದು ವೇಳೆ ರಾಷ್ಟ್ರೀಯ ಶಿಕ್ಷಣ ನೀತಿ ಹಿಂಪಡೆದರೆ ಕೇಂದ್ರ ಸರ್ಕಾರ ನೀಡಿದ ಅನುದಾನವನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಮರಳಿಸಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಎಬಿವಿಪಿ ರಾಜ್ಯ ಕಾರ್ಯದರ್ಶಿ ಎಚ್.ಕೆ.ಪ್ರವೀಣ್, ನಗರ ಕಾರ್ಯದರ್ಶಿ ರಘುನಂದನ ಹೆಗಡೆ, ಪ್ರಮುಖರಾದ ಲೋಹಿತ್, ಬಿ.ಅಭಿಷೇಕ್, ವರುಣ್, ಮನೋಜ್, ವೇದಶ್ರೀ ಇತರರಿದ್ದರು.