

ಬೆಂಗಳೂರು: ಕುಡಿದ ಮತ್ತಿನಲ್ಲಿ ಪುತ್ರಿಯನ್ನು ಅಶ್ಲೀಲ ಪದದಿಂದ ನಿಂದಿಸಿದ್ದ ಕಾರಣಕ್ಕೆ ಸೆಕ್ಯುರಿಟಿ ಗಾರ್ಡ್‌ನ್ನು ಥರ್ಮಾ ಫ್ಲಾಸ್ಕ್ ನಿಂದ ತಲೆ ಮೇಲೆ ಹಲ್ಲೆ ನಡೆಸಿ ಸ್ನೇಹಿತನೇ ಹತ್ಯೆ ಮಾಡಿದ್ದಾನೆ.
ದಿಣ್ಣೂರು ಸಿಗೇಹಳ್ಳಿ ನೇಪಾಳಿ ಕಾಲನಿ ನಿವಾಸಿ ಪ್ರೇಮ್ ರಾಜ್ ಉಪಾಧ್ಯಾಯ (57) ಮೃತ ವ್ಯಕ್ತಿ. ಸಿಗೇಹಳ್ಳಿ ಗೇಟ್ ಬಳಿಯ ಹೋಟೆಲ್ ಸೆಕ್ಯೂರಿಟಿ ಗಾರ್ಡ್ ಆಗಿದ್ದ. ಈತನ ಕೊಲೆ ಮಾಡಿದ ಆರೋಪಿ ಧರ್ಮೇಂದ್ರ ಸಿಂಗ್ (40) ಎಂಬಾತನನ್ನು ಬಂಧಿಸಲಾಗಿದೆ ಎಂದು ವೈಟ್‌ಫೀಲ್ಡ್ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ನೇಪಾಳ ಮೂಲದ ಪ್ರೇಮ್ ರಾಜ್ ಉಪಾಧ್ಯಾಯ ಮತ್ತು ಧರ್ಮೇಂದ್ರ ಸಿಂಗ್, ಹೋಟೆಲ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. 2 ತಿಂಗಳ ಹಿಂದೆ ಮದ್ಯ ಸೇವನೆ ಮಾಡಿಕೊಂಡು ಕೆಲಸಕ್ಕೆ ಬರುತ್ತಿದ್ದ ಆರೋಪದ ಮೇಲೆ ಧರ್ಮೇಂದ್ರ ಸಿಂಗ್‌ನನ್ನು ಕೆಲಸದಿಂದ ಕಿತ್ತು ಹಾಕಿದ್ದರು.
ಬುಧವಾರ ಬೆಳಗ್ಗೆ 10.30ರಲ್ಲಿ ಪ್ರೇಮ್ ರಾಜ್ ಮತ್ತು ಧರ್ಮೇಂದ್ರ ಸಿಂಗ್ ಸೇರಿ ನಾಲ್ವರು ಬಾರ್‌ಗೆ ಹೋಗಿ ಕಂಠಮಟ್ಟ ಮದ್ಯ ಸೇವನೆ ಮಾಡಿದ್ದರು. ಆರೋಪಿಯ ಪತ್ನಿ ಕೆಲಸಕ್ಕೆ ಹೋಗಿದ್ದು, ಪುತ್ರಿ ಶಾಲೆಗೆ ಹೋಗಿದ್ದಳು. ಹಾಗಾಗಿ ಮನೆಯಲ್ಲಿ ಯಾರು ಇಲ್ಲವೆಂದು ಧರ್ಮೇಂದ್ರ ಸಿಂಗ್, ಸ್ನೇಹಿತರನ್ನು ಮನೆಗೆ ಕರೆದುಕೊಂಡು ಬಂದಿದ್ದ.
ಸ್ವಲ್ಪ ಹೊತ್ತಿಗೆ ಇಬ್ಬರು ಸ್ನೇಹಿತರು ಅಲ್ಲಿಂದ ಹೊರಟ್ಟು ಹೋಗಿದ್ದರು. ಉಳಿದ ಪ್ರೇಮ್ ರಾಜ್ ಮತ್ತು ಧರ್ಮೇಂದ್ರ ಸಿಂಗ್, ಮತ್ತೆ ಬಾರ್‌ಗೆ ಹೋಗಿ ಮದ್ಯ ಸೇವನೆ ಮಾಡಿಕೊಂಡು ವಾಪಸ್ ಮನೆಗೆ ಬಂದಿದ್ದರು. ಅಮಲಿನಲ್ಲಿ ಧರ್ಮೇಂದ್ರ ಸಿಂಗ್ ಪುತ್ರಿಯನ್ನು ಕುರಿತು ಅಶ್ಲೀಲ ಪದದಿಂದ ಪ್ರೇಮ್ ರಾಜ್ ನಿಂದಿಸಿದ್ದ. ಕುಪಿತಗೊಂಡ ಧರ್ಮೇಂದ್ರ ಸಿಂಗ್, ಕೈಯಿಂದ ಪ್ರೇಮ್ ರಾಜ್ ಗೆ ಗುದ್ದಿ ತಲೆ ಮತ್ತು ಮುಖಕ್ಕೆ ಥರ್ಮಾ ಫ್ಲಾಸ್ಕ್ ನಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದ.
ಶವದೊಂದಿಗೆ ಮನೆಯಲ್ಲಿ ಕುಳಿತಿದ್ದ ಆರೋಪಿ, ಮೃತ ದೇಹವನ್ನು ಬೇರೆಡೆಗೆ ಸಾಗಿಸಲು ತನ್ನ ಸ್ನೇಹಿತನಿಗೆ ಕರೆ ಮಾಡಿ 10 ಸಾವಿರ ರೂ. ಕೊಡುತ್ತೆನೆ ಸಹಾಯ ಮಾಡುವಂತೆ ಧರ್ಮೇಂದ್ರ ಸಿಂಗ್ ಕೋರಿದ್ದ. ಗಾಬರಿಗೊಂಡ ಸ್ನೇಹಿತ, ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದ. ಎಚ್ಚೆತ್ತ ಪೊಲೀಸರು, ಸ್ಥಳಕ್ಕೆ ದೌಡಾಯಿಸಿ ಆರೋಪಿ ಧರ್ಮೇಂದ್ರ ಸಿಂಗ್ ಯನ್ನು ವಶಕ್ಕೆ ಪಡೆದು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ. ಕಾಡುಗುಡಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.