

ಚಿಕ್ಕಮಗಳೂರು: ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ಸಮಿತಿಯಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯನ್ನು ಹೊರಗಿಟ್ಟಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದ ಗಾಂಽ ಉದ್ಯಾನದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ ಅಽಕಾರ ದುರ್ಬಳಕೆ ಮಾಡಿಕೊಂಡು ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದೆ. ಚುನಾವಣಾ ಆಯೋಗದಿಂದ ನ್ಯಾಯಮೂರ್ತಿಗಳನ್ನು ಹೊರಗಿಡುವ ಪ್ರಮೇಯವೇ ಇಲ್ಲ. ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಅಕ್ರಮಗಳಿಗೆ ಸಂಪೂರ್ಣ ಕಡಿವಾಣ ಹಾಕಿದ್ದರು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಗೆಲುವಿಗೆ ಪೂರಕವಾದ, ಸೂಕ್ತ ಮಾರ್ಗ ಹುಡುಕಿಕೊಳ್ಳಲು ಈಗಿನಿಂದಲೇ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ಎಲ್.ಮೂರ್ತಿ ದೂರಿದರು.
ನ್ಯಾಯ್ಯಧೀಶರು ಮುಕ್ತವಾಗಿ ನ್ಯಾಯದಾನ ಮಾಡಲು ಸಾಧ್ಯವಾಗುತ್ತಿಲ್ಲ. ಕೇಂದ್ರ ಸರ್ಕಾರ ಕೂಡಲೇ ಹಿಂದಿದ್ದ ವ್ಯವಸ್ಥೆಯನ್ನು ಚುನಾವಣಾ ಆಯುಕ್ತರ ನೇಮಕಾತಿಯಲ್ಲಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಡಾ. ಡಿ.ಎಲ್.ವಿಜಯ್‌ಕುಮಾರ್ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ ಸ್ಥಾನಗಳನ್ನು ಪಡೆಯಲಿದೆ ಎಂದು ಅನೇಕ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಇದರಿಂದ ಬಿಜೆಪಿಗೆ ಭಯ ಶುರುವಾಗಿದೆ. ಹೀಗಾಗಿ ತಾನು ಹೇಳಿದಂತೆ ಕೇಳುವವರನ್ನು ಚುನಾವಣಾ ಆಯೋಗದ ಆಯುಕ್ತರನ್ನಾಗಿ ನೇಮಿಸಲು ನ್ಯಾಯಮೂರ್ತಿಗಳನ್ನು ಕೈಬಿಟ್ಟು ಕ್ಯಾಬಿನೆಟ್ ಸಚಿವರನ್ನು ನೇಮಿಸಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ದೂರಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಮುಖಂಡರಾದ ಕೆ.ಮಹಮದ್, ಎಂ.ಡಿ.ರಮೇಶ್, ನಯಾಜ್, ಹನೀಫ್ ಕೆ.ಭರತ್, ರಾಮಚಂದ್ರ ಇತರರಿದ್ದರು.