

ಬೆಂಗಳೂರು : ರಾಜ್ಯಪಾಲರ ಕಚೇರಿಯನ್ನ ದುರುಪಯೋಗ ಪಡಿಸಿಕೊಳ್ಳುವ ಮೂಲಕ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ರಾಜಕೀಯವಾಗಿ ಮಟ್ಟಹಾಕಲು ಬಿಜೆಪಿ ಕುತಂತ್ರ ನಡೆಸಿದ್ದು, ಅದರ ವಿರುದ್ಧ ನಾವೆಲ್ಲರೂ ಒಗ್ಗಟ್ಟಿನಿಂದ ಕಾನೂನಾತ್ಮಕವಾಗಿ ಹಾಗೂ ರಾಜಕೀಯವಾಗಿ ಹೋರಾಟ ನಡೆಸಲಿದ್ದೇವೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ಈ ನಡೆಯನ್ನ ತೀವ್ರವಾಗಿ ಖಂಡಿಸಿದ್ದಾರೆ.
ನಮ್ಮದು ಸುಭದ್ರ ಸರಕಾರ, ಬಹುಮತ ಪಡೆದು ನ್ಯಾಯಯುತವಾಗಿ 5 ಗ್ಯಾರಂಟಿಗಳನ್ನು ನೀಡುವ ಮೂಲಕ ಜನಪ್ರಿಯತೆಯನ್ನು ಗಳಿಸಿರುವ ಸರಕಾರ. ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು ಕಳಂಕರಹಿತವಾದ ರಾಜಕೀಯ ಜೀವನ. 5 ಗ್ಯಾರಂಟಿ ಯೋಜನೆಗಳ ಮೂಲಕ ಮನೆ ಮಾತಾಗಿರುವ ಸರಕಾರವನ್ನು ಅಸ್ಥಿರಗೊಳಿಸಬೇಕು ಹಾಗೂ ಹಿಂಬಾಗಿಲ ಮೂಲಕ ಅಧಿಕಾರ ಗ್ರಹಿಸಬೇಕು ಎನ್ನುವ ನಿಟ್ಟಿನಲ್ಲಿ ಬಿಜೆಪಿಗರು ರಾಜ್ಯಪಾಲರ ಕಚೇರಿಯನ್ನು ಬಳಸಿಕೊಂಡು ಕುತಂತ್ರ ನಡೆಸಿದ್ದಾರೆ. ಆ ಕುತಂತ್ರದ ವಿರುದ್ಧ ನಾವೆಲ್ಲರೂ ರಾಜಕೀಯವಾಗಿ ಹಾಗೂ ಕಾನೂನಾತ್ಮಕವಾಗಿ ಹೋರಾಟ ಮಾಡಲಿದ್ದೇವೆ ಎಂದು ಹೇಳಿದ್ದಾರೆ.