

ನಂಜನಗೂಡು: ಇಎಸ್‌ಐ ಯೋಜನೆಗೆ ಒಳಪಡಲು ಇರುವ ವೇತನ ಮಿತಿಯನ್ನು ರದ್ದು ಮಾಡಬೇಕು ಹಾಗೂ 1 ವರ್ಷದ ಸೇವೆಗೆ 15 ದಿನಗಳ ವೇತನದ ಬದಲಾಗಿ 60 ದಿನಗಳ ಗ್ರಾಚ್ಯುಟಿಯಾಗಿ ನೀಡುವುದು ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ವರ್ಕರ್ಸ್ ಯೂನಿಯನ್ ವತಿಯಿಂದ ರೇಹ್ಯಾನ್ಸ್ ಟೆಕ್ನಾಲಜಿಸ್ ಕಾರ್ಖಾನೆಯಲ್ಲಿ ಸಹಿ ಸಂಗ್ರಹ ಮಾಡಿ ಸಂಸದ ಪ್ರತಾಪ್ ಸಿಂಹ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಇಎಸ್‌ಐ ಯೋಜನೆಗೆ ಒಳಪಡಲು 21 ಸಾವಿರ ರೂ. ವೇತನ ಮಿತಿಯನ್ನು ನಿಗದಿಪಡಿಸಿದ್ದು, ಇದಕ್ಕಿಂತ ಹೆಚ್ಚಿನ ವೇತನ ಪಡೆಯುವ ಕಾರ್ಮಿಕರು ಇಎಸ್‌ಐ ಸೌಲಭ್ಯ ಪಡೆಯಲು ಅರ್ಹರಾಗಿರುವುದಲ್ಲ. ಹಲವು ಕಾರ್ಖಾನೆಗಳಲ್ಲಿ ಇಎಸ್‌ಐ ಯೋಜನೆಗೆ ಒಳಪಡದ ಕಾರ್ಮಿಕರು ಖಾಸಗಿ ಆರೋಗ್ಯ ವಿಮಾ ಸಂಸ್ಥೆಗಳ ಸೌಲಭ್ಯ ಪಡೆದುಕೊಂಡಿರುತ್ತಾರೆ. ಆದರೆ ಈ ಯೋಜನೆಯಲ್ಲಿ ನಿಗದಿತ ರೋಗಗಳಿಗೆ ಆಯ್ದ ಆಸ್ಪತ್ರೆಗಳಲ್ಲಿ ಮಾತ್ರ ಚಿಕಿತ್ಸೆ ನೀಡುವುದರಿಂದ ಕಾರ್ಮಿಕರು ಹೆಚ್ಚಿನ ತೊಂದರೆಗೆ ಸಿಲುಕುತ್ತಿದ್ದಾರೆ. ಆದ್ದರಿಂದ ಇಎಸ್‌ಐ ಯೋಜನೆಗೆ ನಿಗದಿಪಡಿಸಿರುವ ವೇತನ ಮಿತಿಯನ್ನು ತೆಗೆದು ಹಾಕಬೇಕು. ಕಾರ್ಮಿಕರಿಗೆ 1 ವರ್ಷದ ಸೇವೆಗೆ ನೀಡಲಾಗುವ 15 ದಿನಗಳ ವೇತನದ ಬದಲಾಗಿ 60 ದಿನಗಳ ಗ್ರಾಚ್ಯುಟಿಯಾಗಿ ನೀಡಬೇಕು ಮತ್ತು ಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕ ಮುಖಂಡ ಎ.ಎಸ್.ಗುರುಪಾದಪ್ಪ ಮಾತನಾಡಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯಾದ್ಯಂತ 25 ಲಕ್ಷ ಕಾರ್ಮಿಕರಿಂದ ಸಹಿ ಅಭಿಯಾನ ಪ್ರಗತಿಯಲ್ಲಿದ್ದು, ಜಿಲ್ಲೆಯ ಕಾರ್ಮಿಕರ ಮನವಿ ಪತ್ರವನ್ನು ಸಂಸದ ಪ್ರತಾಪ್ ಸಿಂಹ ಅವರ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲುಪಿಸಲಾಗುವುದು ಎಂದು ಹೇಳಿದರು.
ಕರ್ನಾಟಕ ವರ್ಕರ್ಸ್ ಯೂನಿಯನ್ ಸಂಘಟನೆಯ ಕೃಷ್ಣಪ್ರಸಾದ್, ಎಂ.ಸ್ವಾಮಿ, ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.