

ಶಿವಮೊಗ್ಗ: ಗೋಪಾಳ ಸರ್ವೇ ನಂಬರ್ 49ರಲ್ಲಿರುವ ಆದಿ ರಂಗನಾಥ ದೇವಸ್ಥಾನಕ್ಕೆ ಸಂಬಂಧಿಸಿದ ನಕಲಿ ಹಕ್ಕುಪತ್ರ ರದ್ದುಪಡಿಸುಂತೆ ಒತ್ತಾಯಿಸಿ ಜಿಪಂ ಕಚೇರಿ ಎದುರು ಭೂ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಸ್ಥಳೀಯರು ಸೋಮವಾರ ಪ್ರತಿಭಟನೆ ನಡೆಸಿದರು.
1993 ರಿಂದ 95ರ ಅವಧಿಯಲ್ಲಿ ದೇವಸ್ಥಾನದ ಜಾಗಕ್ಕೆ ಸಂಬಂಧಿಸಿದಂತೆ 182 ನಕಲಿ ಖಾತೆಗಳನ್ನು ಸೃಷ್ಟಿಸಲಾಗಿದೆ. ಈ ನಕಲಿ ಹಕ್ಕುಪತ್ರವನ್ನು ರದ್ದುಪಡಿಸಬೇಕು. 11ನೇ ಶತಮಾನದಲ್ಲಿ ಇತಿಹಾಸ ಪ್ರಸಿದ್ಧ ಹೊಯ್ಸಳ ಕಾಲದ ಈ ದೇವಾಲಯಕ್ಕೆ 22.13 ಎಕರೆ ಜಾಗ ಮಂಜೂರಾಗಿತ್ತು ಎಂದು ಪ್ರತಿಭಟನಾಕಾರರು ತಿಳಿಸಿದರು. ಈ ಭೂಮಿಯ ಪೈಕಿ 5.13 ಎಕರೆ ಖರಾಬು ಜಾಗದಲ್ಲಿ ಆದಿರಂಗನಾಥ ಸ್ವಾಮಿ ದೇವಸ್ಥಾನವಿದೆ. ಸ್ಥಳೀಯರು 2017-18ರಲ್ಲಿ ಹೋರಾಟ ಮಾಡಿದ ಪರಿಣಾಮ ಖರಾಬು ಬಾಬ್ತು ನಕ್ಷೆ ಎಂದು ಗುರುತಿಸಿ ಪ್ರಸ್ತುತ ಜಾಗ ಸಂರಕ್ಷಣೆಯಾಗಿದೆ. ಉಳಿದಂತೆ ನಕಲಿ ಖಾತೆ ಸೃಷ್ಟಿಸಿ ಭೂಕಬಳಿಕೆಗೆ ಸಹಕಾರ ನೀಡಿದ ಅಧಿಕಾರಿಗಳ ವಿರುದ್ಧ ಇದುವರೆಗೂ ಶಿಸ್ತುಕ್ರಮ ಜರುಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಪಡಿಸಿದರು. ಸ್ಥಳೀಯರಾದ ಪಿ.ಸಿ.ಮಂಜುನಾಥ್, ನಾಗರಾಜ್, ಎನ್. ರೂಪಾ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.