

ಪರಮಸಾತ್ವಿಕರಾದ ಮಹಾಭಕ್ತರೆನಿಸಿದ ಪ್ರಹ್ಲಾದರಾಜರ ಮೊರೆಯನ್ನು ಆಲಿಸಿ, ಸರ್ವತ್ರ ವ್ಯಾಪ್ತನಾದ ಮಹಾವಿಷ್ಣು ನರ ಮೃಗ ವೇಷ ಧರಿಸಿ ನರಸಿಂಹನಾಗಿ ಕಂಭದಿಂದ ಪ್ರಕಟನಾದ ಪಾವನ ದಿನವನ್ನು ನರಸಿಂಹ ಜಯಂತಿ ಎಂದು ಆಚರಿಸಲಾಗುತ್ತಿದೆ.
ದುಷ್ಟ-ಶಿಷ್ಟರ ಯುದ್ಧ: ಎಂದಿಗೂ ಹಿಂಸೆಯ ವಿಚಾರವನ್ನೇ ಮಾಡದವ ಪ್ರಹ್ಲಾದ. ಆಟವಾಡುವ ಬಾಲ್ಯಾವಸ್ಥೆಯಲ್ಲಿಯೇ ಮಹಾಸಾಧಕನೆನಿಸಿದವ. ಸದಾ ಕೃಷ್ಣ ಭಕ್ತಿಯಲ್ಲಿಯೇ ಮುಳುಗಿದ ಪ್ರಹ್ಲಾದ ಕೌಮಾರಾವಸ್ಥೆಯಿಂದಲೇ ಭಗವಂತನಲ್ಲಿ ಭಕ್ತಿಯನ್ನು ಪ್ರಾರಂಭಿಸಬೇಕೆಂದು ತನ್ನ ಜೊತೆಗಿನ ಇತರ ಬಾಲಕರಿಗೂ ಉಪದೇಶ ಮಾಡಿದ. ಶಾಂತಿಯ ಪಾಠ ಹೇಳಿದ. ಇಂತಹ ಸಾತ್ವಿಕ ಸ್ವಭಾವದ, ದೈವ ಭಕ್ತ ಪ್ರಹ್ಲಾದನ ತಂದೆ ಹಿರಣ್ಯಕಶಿಪು ತದ್ವಿರುದ್ಧ. ಸದಾ ಸಜ್ಜನರನ್ನೆಲ್ಲ ಬೆದರಿಸಿ ಕ್ರೌರ್ಯ ಮೆರೆದು ತನ್ನನ್ನೇ ದೇವರೆಂದು ಪೂಜಿಸಬೇಕೆಂದು ಆಗ್ರಹಿಸಿ ಹಿಂಸಿಸುವ ಕ್ರೂರಿ. ಮಹಾ ಪಾಪಿ. ಎಲ್ಲರನ್ನೂ ತನ್ನ ಕೆಟ್ಟ ಕ್ರೋಧದಿಂದ ಭಯಭೀತಗೊಳಿಸಿದವನು. ಸಿಂಹದಂತೆ ಉಗ್ರನೂ ಕ್ರೂರಿಯೂ ಆದ ದುರುಳ ಹಿರಣ್ಯಕಶಿಪುವಿಗೆ ಬ್ರಹ್ಮ ದೇವನ ವರವಿತ್ತು. ಆದರೆ ಅವನ ವಿಚಿತ್ರವಾದ ವರದ ನಿಯಮಗಳಂತೆಯೇ ನರಸಿಂಹದೇವನಿಂದ ಅವನ ಸಂಹಾರವಾಯಿತು. ದುಷ್ಟರಿಗೆ ಯಾರ ಬಲವಿದ್ದರೂ ಸರಿ ನರಸಿಂಹನ ಎದುರು ಎಲ್ಲವೂ ತೃಣಕ್ಕೆ ಸಮಾನವೆಂದು ತೋರಿದ.
ನರಸಿಂಹನ ಪ್ರಾದುರ್ಭಾವ: ವಿಜಯದಾಸರಂತೂ ನರಸಿಂಹನು ಕಂಬದಿಂದ ಹೊರಬಂದ ಆ ಸನ್ನಿವೇಶವನ್ನು ಬಹಳ ಸುಂದರವಾಗಿ ತಮ್ಮ ಸುಳಾದಿಯಲ್ಲಿ ವರ್ಣಿಸಿದ್ದಾರೆ. ಪ್ರಹ್ಲಾದ ತನ್ನ ಎರಡೂ ಕೈಗಳನ್ನು ಎತ್ತಿ ರಕ್ಷಿಸು ಎಂದು ಬೇಡಿದಾಗ, ಸವೋತ್ತಮನಾದ ಭಗವಂತ ಬ್ರಹ್ಮಾಂಡದ ಕಟಾಹವೇ ಸೀಳಿದಂತೆ ಭಯಂಕರ ಶಬ್ದ ಮಾಡುತ್ತಾ, ಕೋಟಿ ಕೋಟಿ ಸಿಡಿಲುಗಳು ಬಂದು ಪರ್ವತಕ್ಕೆ ಹೊಡೆದಂತೆ ಆರ್ಭಟಿಸುತ್ತಾ, ಸಿಂಹದ ಮುಖ ಮನುಷ್ಯನ ದೇಹವುಳ್ಳವನಾಗಿ ನರಸಿಂಹ ಅವತಾರ ತಾಳಿ ಕಂಬದಿಂದ ಪ್ರಕಟನಾಗಿ ಬಂದ. ಹಲ್ಲುಗಳನ್ನು ಕಟಕಟನೇ ಕಡಿಯುತ್ತ, ಕೆಂಗಣ್ಣುಗಳಿಂದ ಭಯಂಕರ ಸಿಟ್ಟಿನಿಂದ ನೋಡುತ್ತಾ, ಕೋಟಿ ಮಿಂಚುಗಳ ಆರ್ಭಟವನ್ನು ತೋರುತ್ತಿದ್ದರೂ ಮೋಸರಹಿತನಾದ ಆ ನರಸಿಂಹ ತನ್ನ ಭಕ್ತನ ರಕ್ಷಣೆಗೆ ಬಂದ. ಉಗ್ರ ನರಸಿಂಹ ವೀರಧ್ವನಿಯಿಂದ ಆರ್ಭಟಿಸಿದಾಗ ಕಣ್ಣುಗಳಿಂದ ಕಿಡಿಗಳು ಹಾರುತ್ತಿದ್ದವು.
ಸಪ್ತ ಸಮುದ್ರಗಳು ಉಕ್ಕಿ ನೀರು ಹೊರಚೆಲ್ಲಿ ಬರುವಂತೆ ಅಲ್ಲೋಲ ಕಲ್ಲೋಲವಾಯಿತು. ದೇವತೆಗಳೆಲ್ಲ ತಮ್ಮ ದೇವನ ಈ ಆರ್ಭಟಕ್ಕೆ ಗಾಬರಿಗೊಂಡರು. ಇಂತಹ ಭಯಂಕರ ವೀರನರಸಿಂಹನು ರಕ್ಕಸ ಹಿರಣ್ಯಕಶಿಪುವನ್ನು ತನ್ನ ತೊಡೆಯಮೇಲೆ ಕೆಡವಿ ಪಶ್ಚಿಮ ಸಮುದ್ರದಲ್ಲಿ ಮುಳುಗುತ್ತಿರುವ ಸೂರ್ಯನನ್ನು ನೋಡುತ್ತಾ, ಉದಯಾಸ್ತಗಳ ಮಧ್ಯದ ಸಮಯದಲ್ಲಿ ಹೊಸ್ತಿಲಲ್ಲಿ ಕುಳಿತ ತನ್ನ ಉಗುರುಗಳಿಂದ ದುಷ್ಟ ಹಿರಣ್ಯಕಶಿಪುವಿನ ಕರುಳನ್ನು ಬಗೆದು, ತನ್ನ ಕಂಠದಲ್ಲಿ ಮಾಲೆಯಂತೆ ಧರಿಸಿದ.
ನರಸಿಂಹ ದೇವರ ಮೂರನೇಯ ಕಣ್ಣಿನಿಂದ ಹೊರಟ ಕಿಡಿಗಳು ಸಮಸ್ತ ಬ್ರಹ್ಮಾಂಡವನ್ನೇ ಸುಟ್ಟು ಹಾಕುತ್ತವೆ ಎಂದು ಗಾಬರಿಗೊಂಡು ಪ್ರಹ್ಲಾದ ಭಕ್ತಿಯಿಂದ ಪ್ರಾರ್ಥಿಸಿದ. ಉಗ್ರ ನರಸಿಂಹ ತನ್ನ ಭಕ್ತನ ಪ್ರಾರ್ಥನೆಗೆ ಶಾಂತನಾದ. ದಯೆತೋರಿದ. ಹೀಗೆ ಭಗವಂತ ತನ್ನ ಪರಾಕ್ರಮವನ್ನು ಮೆರೆದು ಸಜ್ಜನರಿಗೆ ಉಂಟಾಗುವ ಉಪದ್ರವಗಳನ್ನು ನಾಶಮಾಡಿ, ದುಷ್ಟನ ದಮನವನ್ನು ಮಾಡಿದ.
ನರಹರಿಯ ನಾಮಸ್ಮರಣೆ: ನರಸಿಂಹನ ನಾಮಸ್ಮರಣೆಯಿಂದ ಸಾಧು ಸ್ವಭಾವದವರೂ ಸಿಂಹದಂತೆ ಬಲಶಾಲಿಗಳಾಗುತ್ತಾರೆ. ಸಿಂಹದಂತೆ ಉಗ್ರರಾದ ದೈತ್ಯರು ನರರಂತೆ ಸಾಮಾನ್ಯರಾಗುತ್ತಾರೆ. ಅತ್ಯಂತ ಭಯಂಕರನಾದರೂ ನರಸಿಂಹ ತನ್ನ ಭಕ್ತರಿಗೆ ಮಾತ್ರ ದಯಾಸಮುದ್ರನೇ. ಭಯನಿವಾರಣನೇ. ಸಜ್ಜನರಿಗೆ ಸೌಮ್ಯನೇ. ಎಂತಹ ಘನಘೊರ ಪರಿಸ್ಥಿತಿಗಳಿದ್ದರೂ ನರಸಿಂಹನ ನಾಮಸ್ಮರಣೆ ದುರಿತ ಪರಿಹಾರಕವೆಂದು ದಾಸಶ್ರೇಷ್ಠರೆಲ್ಲ ಹಾಡಿ ಕೊಂಡಾಡಿರುವರು. ಶಾಂತಿ ಪ್ರಿಯರ ಜೀವನಕ್ಕೆ ದೈತ್ಯರ ಉಪಟಳ ಎಂದಿಗೂ ತಪ್ಪಿದ್ದಲ್ಲ. ಅಹಿಂಸಾಪರಿದ್ದವರಿಗೆ ಆತಂಕಿಗಳಿಂದ ಹಿಂಸೆ ಎಲ್ಲ ಯುಗಗಳಲ್ಲಿಯೂ ನಡೆಯುತ್ತಲೇ ಬಂದಿದೆ. ಆದರೆ ಶಾಂತ ಸ್ವರೂಪಿಯಾದ ಭಗವಂತ ಉಗ್ರ ರೂಪಿಯಾಗಿ ಬಂದು ದೈತ್ಯರನ್ನು ಸಂಹರಿಸಿಯೇ ತೀರುತ್ತಾನೆ. ಸತ್ಯಕ್ಕೇ ಎಂದಿಗೂ ಜಯ ಎಂಬುದು ಎಲ್ಲಾ ಯುಗದ ಧರ್ಮ. ಇದನ್ನು ತೋರಿಸಲೆಂದೇಭಗವಂತ ನರಸಿಂಹನಾಗಿ ಬಂದ. ಅವನ ಸ್ಮರಣೆ ಸದಾ ಭಯನಿವಾರಕ.