

ನವದೆಹಲಿ: ಕರೊನಾ ವೈರಸ್ ಸೋಂಕಿತ ಪ್ರಕರಣಗಳನ್ನು ಪತ್ತೆಹಚ್ಚಲು ಕೇಂದ್ರ ಸರ್ಕಾರ ಗುರುವಾರ "ಆರೋಗ್ಯ ಸೇತು" ಹೆಸರಿನ ಮೊಬೈಲ್ ಅಪ್ಲಿಕೇಶನ್ ಅನ್ನು ಉದ್ಘಾಟಿಸಿದೆ.
ಆರೋಗ್ಯ ಸೇತು ಆ್ಯಪ್ ಅನ್ನು ಆ್ಯಂಡ್ರಾಯ್ಡ್(Android) ಮತ್ತು ಐಒಎಸ್(iOS) ಬಳಕೆದಾರರು ಉಪಯೋಗಿಸಬಹುದಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಅಡಿಯಲ್ಲಿ ಬರುವ ರಾಷ್ಟ್ರೀಯ ಮಾಹಿತಿ ಕೇಂದ್ರ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಿದೆ. ಬಳಕೆದಾರರು ಸೋಂಕಿತರ ಸಮೀಪವಿದ್ದರೆ ಆ್ಯಪ್ ಎಚ್ಚರಿಕೆ ಸಂದೇಶ ನೀಡಲಿದೆ.
ಆ್ಯಪ್ ವಿವರಣೆಯಲ್ಲಿರುವಂತೆ ಕೋವಿಡ್-19 ತಡೆಗಟ್ಟಲು ಸೂಕ್ತವಾದ ಸಲಹೆ ಮತ್ತು ಒಳ್ಳೆಯ ಅಭ್ಯಾಸಗಳ ಬಗ್ಗೆ ಪೂರ್ವಭಾವಿಯಾಗಿ ಬಳಕೆದಾರರಿಗೆ ಮಾಹಿತಿ ನೀಡುವುದು ಆ್ಯಪ್ನ ಗುರಿಯಾಗಿದೆ. ಜನರು ಕರೊನಾ ವೈರಸ್ ಸೋಂಕಿನ ಅಪಾಯವನ್ನು ನಿರ್ವಹಿಸಲು ಆರೋಗ್ಯ ಸೇತು ಆ್ಯಪ್ ಅನುವು ಮಾಡಿಕೊಡುತ್ತದೆ. ಅತ್ಯಾಧುನಿಕ ಬ್ಲೂಟೂತ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಇತರರೊಂದಿಗಿನ ಸಂವಹನದ ಆಧಾರದ ಮೇಲೆ ಆ್ಯಪ್ ಲೆಕ್ಕಾಚಾರ ಮಾಡುತ್ತದೆ.
ಬಳಕೆದಾರ ಸ್ನೇಹಿ ಪ್ರಕ್ರಿಯೆಯೊಂದಿಗೆ ಸ್ಮಾರ್ಟ್ ಫೋನ್ಗಳಲ್ಲಿ ಆ್ಯಪ್ ಇನ್ಸ್ಟಾಲ್ ಮಾಡಿದ ತಕ್ಷಣ ಸಮೀಪದಲ್ಲಿರುವ ಆರೋಗ್ಯಸೇತುವಿನಿಂದ ಸ್ಥಾಪಿಸಲಾದ ಇತರೆ ಸಾಧನಗಳನ್ನು ಅದು ಪತ್ತೆ ಮಾಡುತ್ತದೆ. ಯಾರಾದರೂ ಕರೊನಾ ಸೋಂಕಿಗೆ ತುತ್ತಾಗಿದ್ದರೆ, ಅತ್ಯಾಧುನಿಕ ಮಾನದಂಡಗಳ ಆಧಾರದ ಮೇಲೆ ಸೋಂಕಿನ ಪ್ರಭಾವವನ್ನು ಆ್ಯಪ್ ಲೆಕ್ಕ ಹಾಕಿ ಮಾಹಿತಿ ನೀಡುತ್ತದೆ.
ಕೋವಿಡ್ -19 ಸೋಂಕಿನ ಹರಡುವಿಕೆಯ ಅಪಾಯವನ್ನು ನಿರ್ಣಯಿಸಲು ಮತ್ತು ಅಗತ್ಯವಿರುವಲ್ಲಿ ಪ್ರತ್ಯೇಕತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಸಮಯೋಚಿತ ಕ್ರಮಗಳನ್ನು ತೆಗೆದುಕೊಳ್ಳಲು ಈ ಆ್ಯಪ್ ಸರ್ಕಾರಕ್ಕೆ ಸಹಾಯ ಮಾಡುತ್ತದೆ. ಆ್ಯಪ್ನಲ್ಲಿ ಖಾಸಗಿ ಮಾಹಿತಿಗೆ ರಕ್ಷಣೆಯನ್ನು ನೀಡಲಾಗಿದ್ದು, ಆ್ಯಪ್ 11 ಭಾಷೆಗಳಲ್ಲಿ ಲಭ್ಯವಿದೆ. (ಏಜೆನ್ಸೀಸ್)