'ನಾಳೆ ಬೆಳಗ್ಗೆ 9ಗಂಟೆಗೆ ದೇಶದ ಜನರಿಗೆ ಒಂದು ವಿಡಿಯೋ ಸಂದೇಶ ನೀಡಲಿದ್ದೇನೆ...' : ಪ್ರಧಾನಿ ನರೇಂದ್ರ ಮೋದಿ ಟ್ವೀಟ್​

Narendra Modi
Published on

ನವದೆಹಲಿ: ಕರೊನಾ ವೈರಸ್​ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರು ಬಳಿಕ ಮಾಡಿದ ಟ್ವೀಟ್​ ಕುತೂಹಲ ಹುಟ್ಟಿಸಿದೆ.

ಮಾ.24ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಅಂದು ರಾತ್ರಿ 12 ಗಂಟೆಯಿಂದಲೇ ಭಾರತ ಲಾಕ್​ಡೌನ್​ ಆಗಲಿದೆ ಎಂದು ಘೋಷಿಸಿದ್ದರು. ಹಾಗೇ ಮೊನ್ನೆ ಮನ್​ ಕೀ ಬಾತ್​​ನಲ್ಲಿ ಮಾತನಾಡಿ, ಕರೊನಾ ವೈರಸ್​ ಬಗ್ಗೆ ಅರಿವು ಮೂಡಿಸಿದ್ದರು.

ಅದರ ಹೊರತಾಗಿಯೂ ಸಾಮಾಜಿಕ ಜಾಲತಾಣಗಳ ಮೂಲಕ ದೇಶದ ಜನರೊಂದಿಗೆ ಸಂವಹನ ನಡೆಸುತ್ತಲೇ ಇದ್ದಾರೆ. ಕರೊನಾ ಗಂಭೀರತೆ ಅರ್ಥ ಮಾಡಿಕೊಳ್ಳಿ, ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಂದೇಶ ನೀಡುತ್ತಲೇ ಇದ್ದಾರೆ.

ಹಾಗೇ ಇಂದು ಕೂಡ ಒಂದು ಟ್ವೀಟ್​ ಮಾಡಿದ್ದಾರೆ. ನಾಳೆ (ಏಪ್ರಿಲ್​3) ಬೆಳಗ್ಗೆ 9ಗಂಟೆಗೆ ನಾನು ದೇಶದ ಜನರಿಗೆ ವಿಡಿಯೋ ಸಂದೇಶವೊಂದನ್ನು ನೀಡುತ್ತೇನೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಕರೊನಾ ವೈರಸ್​ ಪ್ರಮಾಣದ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. 1965 ಸೋಂಕಿತರು ಇದ್ದು, 50 ಮಂದಿ ಮೃತಪಟ್ಟಿದ್ದಾರೆ.

ಲಾಕ್​ಡೌನ್​ ಇದ್ದರೂ ಜನರ ಓಡಾಟ ಸಂಪೂರ್ಣ ಬಂದ್​ ಆಗಿಲ್ಲ. ಹಾಗಾಗಿ ಮೋದಿಯವರು ವಿಡಿಯೋ ಸಂದೇಶದಲ್ಲಿ ಏನು ಹೇಳಬಹುದು ಎಂಬ ಕುತೂಹಲ ಸೃಷ್ಟಿಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net