ಬಿಡಿಎ ಕಾಂಪ್ಲೆಕ್ಸ್ ಉಳಿಸುವ ಹೋರಾಟಕ್ಕೆ ಎಎಪಿ ಬೆಂಬಲ

aap press meet
Published on

ಬೆಂಗಳೂರು: ’ಬಿಡಿಎ ಕಾಂಪ್ಲೆಕ್ಸ್ ಉಳಿಸಿ ಹೋರಾಟ ಸಮಿತಿ’ ವತಿಯಿಂದ ಸೆಪ್ಟೆಂಬರ್ 12 ರಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಕರೆಕೊಟ್ಟಿದ್ದು, ಈ ಪ್ರತಿಭಟನೆಗೆ ಆಮ್ ಆದ್ಮಿ ಪಾರ್ಟಿ ಸಂಪೂರ್ಣವಾಗಿ ಬೆಂಬಲ ನೀಡಲಿದೆ. ಪಕ್ಷದ ಎಲ್ಲಾ ಕಾರ್ಯಕರ್ತರು, ನಾಯಕರು ಭಾಗಿಯಾಗಲಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ತಿಳಿಸಿದ್ದಾರೆ.

7 ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಸರ್ಕಾರ ಖಾಸಗೀಕರಣ ಮಾಡಲು ಹೊರಟಿದೆ. ಇದು ಖಾಸಗೀಕರಣ ಅಲ್ಲ ಲೀಸ್‌ಗೆ ನೀಡಲಾಗುತ್ತಿದೆ ಎಂದು ಅವರು ಹೇಳಬಹುದು, ಆದರೆ ಮೊದಲು 30 ವರ್ಷ ಲೀಸ್‌ಗೆ ಕೊಡುತ್ತಾರೆ, ಬಳಿಕ ಇನ್ನೂ 30 ವರ್ಷ ಎನ್ನುತ್ತಾರೆ. ಕೊನೆಗೆ 90, 120 ವರ್ಷ ಎಂದು ಕೊನೆಗೆ ಆ ಆಸ್ತಿಗಳನ್ನು ಖಾಸಗಿಯವರೇ ಖರೀದಿ ಮಾಡುತ್ತಾರೆ ಈ ನಿಟ್ಟಿನಲ್ಲಿ ಎಎಪಿ ಸುಮಾರು ವರ್ಷಗಳಿಂದ ಬಿಡಿಎ ಕಾಂಪ್ಲೆಕ್ಸ್ ಖಾಸಗೀಕರಣದ ವಿರುದ್ಧ ಹೋರಾಟ ಮಾಡುವುದರ ಜತೆಗೆ ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಕಾಂಪ್ಲೆಕ್ಸ್ ಕಟ್ಟಿದರೆ 70% ಖಾಸಗಿಯವರಿಗೆ ಮತ್ತು ಬಿಡಿಎಗೆ 30% ಭಾಗ ಕೊಡುತ್ತಾರೆ ಎಂದು ಹೇಳಿದ್ದಾರೆ. ಎಲ್ಲಾ ಬಿಡಿಎ ಕಾಂಪ್ಲೆಕ್ಸ್‌ಗಳು ಆಯಕಟ್ಟಿನ ಜಾಗದಲ್ಲಿದ್ದು ಸಾವಿರಾರು ಕೋಟಿ ಬೆಲೆ ಬಾಳುತ್ತವೆ. 7 ಬಿಡಿಎ ಕಾಂಪ್ಲೆಕ್ಸ್‌ಗಳ ಒಟ್ಟು ಮೌಲ್ಯ 20-25 ಸಾವಿರ ಕೋಟಿ ಆಗುತ್ತದೆ ಇಷ್ಟು ದುಡ್ಡನ್ನು ಲೂಟಿ ಮಾಡಲು ರಾಜಕಾರಣಿಗಳು ಮುಂದಾಗಿದ್ದಾರೆ ಎಂದರು.

ಇಂದಿರಾ ನಗರ ಬಿಡಿಎ ಕಾಂಪ್ಲೆಕ್ಸ್ ಅನ್ನು ಮೇವರಿಕ್ ಹೋಲ್ಡಿಂಗ್ಸ್ ಅವರಿಗೆ ನೀಡುತ್ತಾರಂತೆ. ಇದೇ ಮೇವರಿಕ್ ಹೋಲ್ಡಿಂಗ್ಸ್‌ನ ಗರುಡಾಚಾರ್ ಪಿಪಿಪಿ ಮಾದರಿಯಲ್ಲಿ ಗರುಡಾ ಮಾಲ್ ಕಟ್ಟಿ ಬಿಬಿಎಂಪಿಯನ್ನು ಮುಳುಗಿಸಿದ್ದಾರೆ. ಬಿಬಿಎಂಪಿಗೆ ಇವರು 60-70 ಕೋಟಿ ರೂಪಾಯಿ ಆಸ್ತಿ ತೆರಿಗೆ ಬಾಕಿ ಇದೆ. ಇಂತಹವರಿಗೆ ಇದನ್ನು ಕೊಡಲು ಮುಂದಾಗಿದ್ದಾರೆ. ಇನ್ನುಳಿದ ಆರು ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಎಂಫಾರ್ ಎನ್ನುವ ಕಂಪನಿಗೆ ಕೊಡಲು ನಿರ್ಧರಿಸಿದ್ದಾರೆ. ಈ ಕಂಪನಿ ಬಗ್ಗೆ ಅನೇಕ ಕಥೆಗಳಿವೆ, ಬಿಡಿಎ ಅಧ್ಯಕ್ಷ ಹ್ಯಾರಿಸ್ ಅವರ ಸಹಭಾಗಿತ್ವ ಇದೆ ಎಂದು ಹೇಳಲಾಗಿದೆ. ಇಬ್ಬರು ಮೂವರು ರಾಜಕಾರಣಿಗಳು ಒಟ್ಟಾಗಿ ಲೂಟಿ ಮಾಡಲು ಮುಂದಾಗಿದ್ದಾರೆ ಎಂದು ಮೋಹನ್ ದಾಸರಿ ಆಕ್ರೋಶ ವ್ಯಕ್ತಪಡಿಸಿದರು.

ನಿಮಗೆ ಬಿಡಿಎ ಕಾಂಪ್ಲೆಕ್ಸ್ ನೋಡಿಕೊಳ್ಳಲು ಆಗಲಿಲ್ಲ ಎಂದರೆ ಅವುಗಳನ್ನು ಉರುಳಿಸಿ ಪಾರ್ಕ್ ಮಾಡಿ. ಸ್ಥಳೀಯ ನಿವಾಸಿಗಳೇ ಅದನ್ನು ನೋಡಿಕೊಳ್ಳುತ್ತಾರೆ. ಇಂದು ಜಾಗ ಖರೀದಿ ಮಾಡಿ, ಆಸ್ಪತ್ರೆ, ಶಾಲೆ ಕಟ್ಟಲು ಆಗಲ್ಲ. ಸರ್ಕಾರಿ ಸ್ವತ್ತುಗಳು ಖಾಸಗಿಯವರ ಪಾಲಾಗಲು ಆಮ್ ಆದ್ಮಿ ಪಾರ್ಟಿ ಬಿಡಲ್ಲ ಎಂದು ಎಚ್ಚರಿಕೆ ನೀಡಿದರು.ಪಕ್ಷದ ಮುಖಂಡರಾದ ಅನಿಲ್ ನಾಚಪ್ಪ , ವೀಣಾ ಸರ್ರಾವ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net