

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಗುರಪ್ಪನ ಪಾಳ್ಯ ವಾರ್ಡಿನ ಬಿಸ್ಮಿಲ್ಲ ನಗರದಲ್ಲಿ ನಡೆಯುತ್ತಿರುವ ಸಮುದಾಯ ಭವನ ನಿರ್ಮಾಣವನ್ನು ಅರ್ಧಕ್ಕೆ ನಿಲ್ಲಿಸಿದ್ದು ಭವನದ ನಿರ್ಮಾಣ ಕೆಲಸ ಪೂರ್ತಿ ಮಾಡಿ ಜನ ಬಳಕೆಗೆ ತೆರವು ಮಾಡಬೇಕೆಂದು ಆಮ್ ಆದ್ಮಿ ಪಕ್ಷದ ಜಯನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಡಾ. ಸರವಣ ಒತ್ತಾಯಿಸಿದರು.
ನಿರ್ಮಾಣ ಹಂತದಲ್ಲಿ ಸ್ಥಗಿತವಾಗಿರುವ ಸಮುದಾಯ ಭವನದ ಸ್ಥಳಕ್ಕೆ ಆಮ್ ಆದ್ಮಿ ಮುಖಂಡರ ಜತೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಡಾ. ಸರವಣ, ಸಮುದಾಯ ಭವನದ ಕಾಮಗಾರಿ 4 ವರ್ಷಗಳಿಂದ ಯಾವುದೇ ರೀತಿಯ ಕೆಲಸ ಕಾರ್ಯ ನಡೆಯದೆ ಪಾಳು ಬಿದ್ದಿದ್ದು, ಅಕ್ರಮ ಚಟುವಟಿಕೆಗಳಿಗೆ ಆಶ್ರಯ ತಾಣವಾಗಿದೆ. 2020ರಲ್ಲಿ ಸಮುದಾಯ ಭವನ ನಿರ್ಮಾಣ ಅರ್ಧಕ್ಕೆ ನಿಲ್ಲಿಸಲಾಗಿದೆ. ಬಿಬಿಎಂಪಿ ಸದಸ್ಯರ ಅಧಿಕಾರ ಅವಧಿ 2020ರಲ್ಲೇ ಮುಕ್ತಾಯವಾಗಿದೆ. ಸದ್ಯ ಯಾವುದೇ ಕಾರ್ಪೋರೇಟರ್ ಇಲ್ಲದ ಕಾರಣ ಇಲ್ಲಿನ ಶಾಸಕರಿಗೆ ಮನವಿ ಮಾಡುತ್ತಿದ್ದು, ಸಮುದಾಯ ಭವನದ ಪರಿಸ್ಥಿತಿಯನ್ನು ವೀಕ್ಷಿಸುವಂತೆ ಒತ್ತಾಯಿಸಿದರು.
ಸಮುದಾಯ ಭವನ ನಿರ್ಮಾಣವಾದರೆ ಜನಸಾಮಾನ್ಯರಿಗೆ ಮತ್ತು ಬಡವರ ಮದುವೆ, ಹುಟ್ಟುಹಬ್ಬ ಮತ್ತು ಹಲವಾರು ಕಾರ್ಯಗಳಿಗೆ ಉಪಯೋಗವಾಗಲಿದೆ. ಮದುವೆ, ನಾಮಕರಣ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಕಡಿಮೆ ದರದಲ್ಲಿ ಜನರಿಗೆ ಸಿಗಲಿದೆ, ಆದರೆ,ಸಮುದಾಯ ಭವನ ಆವರಣದಲ್ಲಿ ಬಿಬಿಎಂಪಿ ಕಸ ವಿಂಗಡಿಸುವ ಕೆಲಸ ಮಾಡುತ್ತಿದ್ದು, ಡೆಂಗ್ಯೂ ಹರಡುವ ಸೊಳ್ಳೆ ಫ್ಯಾಕ್ಟರಿಯಂತಾಗಿದೆ ಎಂದರು.
ಸಮುದಾಯ ಭವನ ಜನ ಸಾಮಾನ್ಯರ ತೆರಿಗೆ ಹಣ ಯಾವುದೇ ರೀತಿಯ ಉಪಯೋಗವಾಗದೆ, ನೆನೆಗುದಿಗೆ ಬಿದ್ದಿದ್ದು, ಈ ಸಮುದಾಯ ಭವನದ ಕಾಮಗಾರಿಯನ್ನು 15 ದಿನಗಳಲ್ಲಿ ಮತ್ತೆ ಆರಂಭಿಸಿ, ಜನ ಸಾಮಾನ್ಯರಿಗೆ ಉಪಯೋಗವಾಗುವಂತೆ ಮಾಡಬೇಕು, ಇಲ್ಲವಾದಲ್ಲಿ ಆಮ್ ಆದ್ಮಿ ಪಾರ್ಟಿ ವತಿಯಿಂದ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಆಮ್ಮ ಆದ್ಮಿ ಪಾರ್ಟಿ ಬೆಂಗಳೂರು ನಗರ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಹಾಗೂ ಗುರಪ್ಪನ ಪಾಳ್ಯ ಕ್ಷೇತ್ರದ ಆಕಾಂಕ್ಷಿ ಫಿರೋಝ್ ಖಾನ್ ಮಾತನಾಡಿ, 2015ರ ಬಿಬಿಎಂಪಿ ಚುನಾವಣೆ ಬಳಿಕ ಇಲ್ಲಿ ಸಮುದಾಯ ಭವನ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆಯಾಗಿದೆ. ಆದರೆ ಬಿಡುಗಡೆ ಹಣವನ್ನು ಸರಿಯಾಗಿ ಬಳಕೆ ಮಾಡಿದ್ದರೆ ಸಮುದಾಯ ಭವನ ನಿರ್ಮಾಣವೇ ಪೂರ್ತಿಯಾಗುತ್ತಿತ್ತು, ಆದರೆ ಭ್ರಷ್ಟಾಚಾರದ ಪರಿಣಾಮ ಅನುದಾನ ಸರಿಯಾಗಿ ಬಳಕೆಯಾಗಿಲ್ಲ. ಅರ್ಧ ಕೆಲಸ ಮಾಡುವ ಮೊದಲೇ ಪೂರ್ತಿ ಹಣ ಖಾಲಿ ಮಾಡಿದ್ದಾರೆ, ಬಿಬಿಎಂಪಿ ಚುನಾವಣೆ ನಡೆಯದ ಮತ್ತಷ್ಟು ವಿಳಂಬವಾಗಿದೆ ಎಂದರು.
ಇಲ್ಲಿನ ಶಾಸಕರು ಭವನ ನಿರ್ಮಾಣಕ್ಕಾಗಿ ಅಧಿವೇಶನದಲ್ಲಿ ಚರ್ಚಿಸಿ ಹಣ ಬಿಡುಗಡೆ ಮಾಡಬೇಕು, ಇದಕ್ಕೆ ಬಿಡುಗಡೆಯಾಗಿರುವ ಅನುದಾನ ಸರಿಯಾಗಿ ಬಳಕೆಯಾಗದ ಬಗ್ಗೆ ತನಿಖೆ ನಡೆಸಬೇಕು, ಇಲ್ಲವಾದಲ್ಲಿ ಆಮ್ ಆದ್ಮಿ ಪಾರ್ಟಿ ವತಿಯಿಂದ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿ ಬೆಂಗಳೂರು ದಕ್ಷಿಣ ಅಧ್ಯಕ್ಷ ಜೋಶ್ವಾ ಸೈಂಟ್, ಬೆಂಗಳೂರು ಕಾರ್ಯದರ್ಶಿ ಅಂಜನಾ ಗೌಡ, ಆನೇಕಲ್ ಮುನೇಶ್, ಬೆಂಗಳೂರು ಮಾಧ್ಯಮ ಉಸ್ತುವಾರಿ ಅನಿಲ್ ನಾಚಪ್ಪ ಮತ್ತು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಹಾಜರಿದ್ದರು.