ಪಂಜಾಬಲ್ಲಿ ಆಪ್ ಮ್ಯಾಜಿಕ್?: ದೆಹಲಿ ಮಾದರಿ ಆಡಳಿತ ಭರವಸೆ; ಗಮನ ಸೆಳೆದ ಹೊಸ ಪ್ರಯೋಗ

Arvind Kejrival
Published on

| ರಾಘವ ಶರ್ಮ ನಿಡ್ಲೆ ನವದೆಹಲಿ

ರಾಜಧಾನಿ ದೆಹಲಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​ನ ಸಾಂಪ್ರದಾಯಿಕ ರಾಜಕಾರಣದ ಬದಲಿಗೆ ಹೊಸ ಮಾದರಿಯ ರಾಜಕೀಯ ಶೈಲಿ ಮೂಲಕ ಜನಮನ ಗೆದ್ದಿರುವ ಆಮ್ ಆದ್ಮಿ ಪಾರ್ಟಿ ಪಂಜಾಬ್​ನಲ್ಲೂ ಅದೇ ಮಾದರಿ ತಂತ್ರಗಾರಿಗೆ ಮೂಲಕ ಜನಾಕರ್ಷಣೆ ಗಳಿಸಲು ಮುಂದಾಗಿದೆ. ರಾಜ್ಯ ಚುನಾವಣೆಗೆ ನಮ್ಮ ಪಕ್ಷದಿಂದ ಸಿಎಂ ಅಭ್ಯರ್ಥಿ ಯಾರಾಗಬೇಕು ಎಂದು ಜನರೇ ನಿರ್ಧರಿಸಲಿ ಎಂದು ಮತದಾರನಿಗೇ ಆಯ್ಕೆ ನೀಡಿರುವುದು ವಿಪಕ್ಷಗಳಲ್ಲೂ ಅಚ್ಚರಿ ಮೂಡಿಸಿದೆ. ಇಂತಹ ಹೊಸ ಹೊಸ ಪ್ರಯೋಗಗಳಿಂದಾಗಿಯೇ ಸದ್ಯದ ಮಟ್ಟಿಗೆ ದೆಹಲಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​ಗೆ ಆಮ್ ಆದ್ಮಿ ಪಕ್ಷದ ಹತ್ತಿರ ಬರಲೂ ಸಾಧ್ಯವಾಗುತ್ತಿಲ್ಲ.

ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನಾಯಕರು ಆಂತರಿಕ ಸಂಕಟಗಳ ನಡುವೆಯೂ ಗೆದ್ದು ಅಧಿಕಾರಕ್ಕೆ ಬರುತ್ತೇವೆಂದು ಭರವಸೆ ಹೊಂದಿದ್ದರೂ, ದೆಹಲಿ ಮಾದರಿಯಲ್ಲಿ ರಾಜ್ಯದ ನೀರು, ವಿದ್ಯುತ್ ಸೇರಿ ವಿವಿಧ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಮತ್ತು ನಮ್ಮ ಆಡಳಿತ ಕ್ರಮ ಹೇಗಿರಲಿದೆ ಎಂಬುದನ್ನೂ ಕೇಜ್ರಿವಾಲ್ ಈಗಾಗಲೇ ಪಂಜಾಬ್ ಜನತೆಗೆ ವಿವರಿಸಿದ್ದಾರೆ. ವಿದ್ಯುತ್, ನೀರಿನ ಬಿಲ್​ಗಳಲ್ಲಿ ಆಗುತ್ತಿದ್ದ ವ್ಯತ್ಯಾಸ, ಸಮಸ್ಯೆಗಳನ್ನು ಪೂರ್ಣ ಬಗೆಹರಿಸಿರುವ ಕೇಜ್ರಿವಾಲ್ ಸರ್ಕಾರ ಪ್ರಣಾಳಿಕೆಯಲ್ಲಿ ಘೊಷಿಸಿದಂತೆ 200 ಯೂನಿಟ್ ವಿದ್ಯುತ್ ಮತ್ತು 20 ಸಾವಿರ ಲೀಟರ್ ನೀರನ್ನು ಉಚಿತವಾಗಿ ನೀಡುತ್ತಿದೆ. ಅದನ್ನು ಮೀರಿ ವಿದ್ಯುತ್ ಅಥವಾ ನೀರು ಬಳಕೆಯಾದಲ್ಲಿ ಜನರು ಶುಲ್ಕ ಪಾವತಿಸಬೇಕು. ಸರ್ಕಾರದ ಈ ಕ್ರಮದಿಂದ ದೆಹಲಿಯ ಮಧ್ಯಮ, ಕೆಳ ಮಧ್ಯಮ ಹಾಗೂ ಬಡ ವರ್ಗ ಫುಲ್ ಖುಷ್ ಆಗಿರುವುದು ಸುಳ್ಳೇನಲ್ಲ. ಸರ್ಕಾರಿ ಶಾಲೆಗಳಲ್ಲೂ ಕ್ರಾಂತಿಕಾರಕ ಬದಲಾವಣೆಗಳಾಗಿರುವುದು ಕಣ್ಣಿಗೆ ಕಾಣುತ್ತಿವೆ.

2017ರಲ್ಲಿ ಆಪ್ ಪಂಜಾಬ್ ಚುನಾವಣೆ ಸ್ಪರ್ಧಿಸಿದ್ದ ವೇಳೆ ಕಾಂಗ್ರೆಸ್​ಗೆ ಸೆಡ್ಡು ಹೊಡೆಯುವ ನಿರೀಕ್ಷೆಗಳು ಹೆಚ್ಚಿದ್ದವು. ಆದರೆ, ಕ್ಯಾಪ್ಟನ್ ಅಮರಿಂದರ್ ಸಿಂಗ್ ನಾಯಕತ್ವಕ್ಕೆ ತಲೆದೂಗಿದ ಮತದಾರ, ಕಾಂಗ್ರೆಸ್​ನ್ನು ಅಧಿಕಾರದ ಗದ್ದುಗೆ ಏರಿಸಿದ್ದ. 117ರಲ್ಲಿ ಆಪ್ ಗೆದ್ದಿದ್ದು 20 ಸೀಟುಗಳು ಮಾತ್ರ. ಆದರೆ, ಕಳೆದೊಂದು ವರ್ಷದಲ್ಲಿ ಕಾಂಗ್ರೆಸ್​ನಲ್ಲಿ ಹತ್ತು ಹಲವು ಬದಲಾವಣೆಗಳಾಗಿರುವುದಲ್ಲದೆ, ಕಾಂಗ್ರೆಸ್ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು ಆಟಾಟೋಪಗಳಿಂದ ಪಕ್ಷಕ್ಕೆ ಭಾರಿ ಹಾನಿಯಾಗುತ್ತಿದೆ. ಆಂತರಿಕ ತಿಕ್ಕಾಟ, ನಾಯಕರ ನಡುವಿನ ಮುನಿಸುಗಳು ಆಮ್ ಆದ್ಮಿ ಪಕ್ಷಕ್ಕೆ ಹೊಸ ಅವಕಾಶದ ಬಾಗಿಲು ತೆರೆದಿದೆ. ಅಲ್ಲದೆ, ದಿಲ್ಲಿ ಆಪ್ ಶಾಸಕ ಜರ್ನೆಲ್ ಸಿಂಗ್​ರನ್ನು ಉಸ್ತುವಾರಿ ಮತ್ತು ರಾಘವ್ ಚಡ್ಡಾರನ್ನು ಸಹ-ಉಸ್ತುವಾರಿಗಳಾಗಿ ಕಳುಹಿಸಿದ ಬಳಿಕ ರಾಜ್ಯ ಸಂಘಟನೆ ಬಿಗಿಗೊಂಡಿದೆ.

2014ರ ಲೋಕಸಭೆ ಚುನಾವಣೆಯಲ್ಲಿ ಆಮ್ ಆದ್ಮಿ 4 ಸೀಟುಗಳನ್ನು ಗೆದ್ದುಕೊಂಡಿತ್ತಾದರೂ, 2019ರಲ್ಲಿ ಒಂದಕ್ಕಷ್ಟೇ ಸೀಮಿತಗೊಂಡಿತ್ತು. ಪಕ್ಷದ ರಾಜ್ಯಾಧ್ಯಕ್ಷ ಭಗವಂತ್ ಸಿಂಗ್ ಮಾನ್ ಮಾತ್ರ ಸಂಸದರಾಗಿ ಆಯ್ಕೆಯಾಗಿದ್ದರು. ಅಂತಿಮವಾಗಿ, ಸಿಎಂ ಅಭ್ಯರ್ಥಿಯನ್ನಾಗಿ ಆಪ್ ಬೆಂಬಲಿಗರು ಅವರನ್ನೇ ಆಯ್ಕೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ, ದಲಿತ ಸಿಖ್ ನಾಯಕ, ಸಿಎಂ ಚರಣ್​ಜಿತ್ ಚನ್ನಿ ಅವರನ್ನು ಚಮ್ೌರ್ ಸಾಹಿಬ್ ಮತ್ತು ಆದಂಪುರ್ ಎಂಬ 2 ಕ್ಷೇತ್ರಗಳಿಂದ ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿದೆ. ಶೇ.33ರಷ್ಟಿರುವ ದಲಿತ ವೋಟ್​ಬ್ಯಾಂಕ್ ತಮ್ಮತ್ತ ಬಿಗಿಗೊಳಿಸುವುದು ಕೈ ತಂತ್ರಗಾರಿಕೆ. ಈ ನಡುವೆ ಸರ್ಕಾರಿ ಶಾಲೆಗಳಿಗೆ ಕಳುಹಿಸುತ್ತಿರುವ ದಲಿತ ಕುಟುಂಬಗಳನ್ನು ಸೆಳೆಯಲು ಆಪ್ ತಂತ್ರ ಹೂಡಿದೆ. ದೆಹಲಿ ಸರ್ಕಾರಿ ಶಾಲೆಗಳ ಮಾದರಿಯಲ್ಲಿ ಪಂಜಾಬ್ ಶಾಲೆಗಳು ಪರಿವರ್ತನೆಯಾಗಲಿವೆ ಎಂಬ ಭರವಸೆ ಈ ಮತಬ್ಯಾಂಕ್ ಸೆಳೆಯಬಲ್ಲದು ಎನ್ನುವುದು ಆಪ್ ಮುಖಂಡರ ಲೆಕ್ಕಾಚಾರ.

ನಾನು ಮುಖ್ಯಮಂತ್ರಿ ಅಭ್ಯರ್ಥಿಯಲ್ಲ ಎಂದು ಕೇಜ್ರಿವಾಲ್ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. ‘ಆಪ್​ನ್ನು ನೀವು ಗೆಲ್ಲಿಸಿದರೆ, ಪಕ್ಕದ ರಾಜ್ಯದಲ್ಲೇ ಕುಳಿತಿರುವ ಕೇಜ್ರಿವಾಲ್​ರಿಂದ ನಿಮ್ಮ ರಕ್ಷಣೆಯಾಗಲಿದೆ ಎಂಬ ಸಂದೇಶವಂತೂ ಮುಖಂಡರು, ಕಾರ್ಯಕರ್ತರಿಂದ ಜನರಿಗೆ ರವಾನೆಯಾಗುತ್ತಿದೆ. ಅಂದರೆ, ಚುನಾವಣೆಯಲ್ಲಿ ಆಪ್​ನ ಪ್ರಮುಖಾಸ್ತ್ರವೇ ಕೇಜ್ರಿವಾಲ್ ಎಂಬುದು ಸುಸ್ಪಷ್ಟ.

ಇನ್ನೂ ಕನಿಷ್ಠ 10 ಸಚಿವರು ಯೋಗಿ ಸರ್ಕಾರಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ. ಬಿಜೆಪಿ ಬಗ್ಗೆ ಜನರಲ್ಲಿ ಆಕ್ರೋಶ ವ್ಯಾಪಕಗೊಂಡಿದೆ. ನಾವು 50ರಿಂದ 100 ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದೇವೆ. ನಾನು ರೈತ ನಾಯಕ ರಾಕೇಶ್ ಟಿಕಾಯತ್​ರನ್ನು ಭೇಟಿ ಮಾಡಿದೆ. ಸಿಎಂ ಉದ್ಧವ್ ಠಾಕ್ರೆಯವರೂ ಮಾತನಾಡಿ, ರೈತರಿಗೆ ನ್ಯಾಯ ಒದಗಿಸುವ ಹೋರಾಟ ಸುದೀರ್ಘವಾದುದು ಎಂದೂ ಹೇಳಿದ್ದಾರೆ. | ಸಂಜಯ್ ರಾವತ್ ಶಿವಸೇನೆ ಮುಖಂಡ, ರಾಜ್ಯಸಭೆ ಸದಸ್ಯ

ದಲಿತರ ಮನೆಯಲ್ಲಿ ಯೋಗಿ ಊಟ: ಹಿಂದುಳಿದ ಮತ್ತು ಇತರೆ ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯಲು ಸಮಾಜವಾದಿ ಪಾರ್ಟಿ ತಂತ್ರ ಹೂಡುತ್ತಿರುವ ಮಧ್ಯೆ ಈ ಸಿಎಂ ಯೋಗಿ ಆದಿತ್ಯನಾಥ್ ಅವರು ಮಕರ ಸಂಕ್ರಾಂತಿ ದಿನದಂದು ಗೋರಖ್​ಪುರದ ದಲಿತ ಸಮುದಾಯಕ್ಕೆ ಸೇರಿದ ಅಮೃತ್​ಲಾಲ್ ಭಾರತಿ ಎಂಬವರ ಮನೆಯಲ್ಲಿ ಭೋಜನ ಸ್ವೀಕರಿಸಿದ್ದಾರೆ. ಮಕರ ಸಂಕ್ರಾಂತಿ ದಿನದಂದು ನನ್ನನ್ನು ಕಿಚ್​ಡಿ ಸಹಭೋಜನಕ್ಕೆ ಆಹ್ವಾನಿಸಿದ ಅಮೃತ್​ಲಾಲ್​ಗೆ ಧನ್ಯವಾದ ತಿಳಿಸುತ್ತೇನೆ ಎಂದು ಭೋಜನದ ಬಳಿಕ ಯೋಗಿ ಹೇಳಿದ್ದಾರೆ.

ಮೌರ್ಯ ಅಧಿಕೃತ ಸೇರ್ಪಡೆ: ಉತ್ತರ ಪ್ರದೇಶ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಸ್ವಾಮಿ ಪ್ರಸಾದ್ ಮೌರ್ಯ, ಧರಂಸಿಂಗ್ ಸೈನಿ ಹಾಗೂ ರಾಜೀನಾಮೆ ನೀಡಿದ್ದ ಶಾಸಕರು ರಾಜಧಾನಿ ಲಖನೌದಲ್ಲಿ ಸಮಾಜವಾದಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಸಂವಿಧಾನ, ಪ್ರಜಾಪ್ರಭುತ್ವ, ದಲಿತರು, ಹಿಂದುಳಿದವರ ರಕ್ಷಣೆಯೇ ನಮ್ಮ ಗುರಿ ಎಂದಿರುವ ಮೌರ್ಯ, ಈ ಬಾರಿ ಅಖಿಲೇಶ್​ರನ್ನು ರಾಜ್ಯದ ಸಿಎಂ ಮಾಡುವುದಲ್ಲದೆ, 2024ರಲ್ಲಿ ದೇಶದ ಪ್ರಧಾನಿಯನ್ನಾಗಿ ಮಾಡಲಿದ್ದೇವೆ ಎಂದು ಹೇಳಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಧಾರಾ ಸಿಂಗ್ ಚೌಹಾನ್ ಸೇರ್ಪಡೆ ಸಮಾರಂಭದಲ್ಲಿ ಕಾಣಿಸಿಕೊಳ್ಳಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net