ದೆಹಲಿ ಕದನಕ್ಕೆ ಇಂದು ಮತದಾನ: ಅಧಿಕಾರ ಉಳಿಸಿಕೊಳ್ಳಲು ಸಿಎಂ ಕೇಜ್ರಿವಾಲ್ ಯತ್ನ, ಬಿಜೆಪಿಗೆ ಪ್ರತಿಷ್ಠೆ ಕಣ

Delhi Election
Published on

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣಾ ಕದನಕ್ಕೆ ವೇದಿಕೆ ಸಜ್ಜಾಗಿದ್ದು, ಶನಿವಾರ ನಡೆಯುವ ಮತದಾನದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿ 70 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಫೆ.11 ರಂದು ಫಲಿತಾಂಶ ಹೊರಬೀಳಲಿದೆ.

ಆಡಳಿತಾರೂಢ ಆಮ್ ಆದ್ಮಿ ಪಕ್ಷ, ಬಿಜೆಪಿ ಮಧ್ಯೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. 2015ರಲ್ಲಿ ಹೊಸ ಭರವಸೆಗಳ ಮೂಲಕ ಅಲೆ ಎಬ್ಬಿಸಿ ಅಭೂತಪೂರ್ವ ಗೆಲುವು ದಾಖಲಿಸಿದ್ದ ಕೇಜ್ರಿವಾಲ್ ಮತ್ತೆ ಅಧಿಕಾರ ಗದ್ದುಗೆ ಏರಲು ಸಕಲ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಕಳೆದ ಎರಡು ದಶಕಗಳಿಂದ ದೆಹಲಿ ಗದ್ದುಗೆ ಏರದ ಬಿಜೆಪಿಗೆ ಈ ಚುನಾವಣೆ ಪ್ರತಿಷ್ಠೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಸೇರಿ ಬಿಜೆಪಿಯ ಹಲವು ಪ್ರಮುಖ ನಾಯಕರು ಪ್ರಚಾರ ನಡೆಸಿದ್ದಾರೆ. ಬಿಜೆಪಿ ಮೈತ್ರಿ ಪಕ್ಷ ಶಿರೋಮಣಿ ಅಕಾಲಿ ದಳ (ಎಸ್​ಎಡಿ) ಈ ಬಾರಿ ಪ್ರತ್ಯೇಕವಾಗಿ ಚುನಾವಣೆ ಎದುರಿಸುತ್ತಿದೆ. ಬಿಜೆಪಿ ತನ್ನ ಮೈತ್ರಿಪಕ್ಷಗಳಾದ ಜೆಡಿಯು ಮತ್ತು ಲೋಕ ಜನಶಕ್ತಿ ಪಕ್ಷಕ್ಕೆ ಮೂರು ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ. 1998 ರಿಂದ 2013ರವರೆಗೆ ರಾಷ್ಟ್ರ ರಾಜಧಾನಿಯನ್ನು ಆಳಿದ್ದ ಕಾಂಗ್ರೆಸ್ ಇದೇ ಮೊದಲ ಬಾರಿ ದೆಹಲಿಯಲ್ಲಿ ಲಾಲೂ ಪ್ರಸಾದ್​ರ ಆರ್​ಜೆಡಿ ಜತೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿದೆ. ಆರ್​ಜೆಡಿಗೆ ನಾಲ್ಕು ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ.

ದೆಹಲಿಯ 70 ವಿಧಾನಸಭಾ ಕ್ಷೇತ್ರಗಳ 13,750 ಮತಗಟ್ಟೆಗಳಲ್ಲಿ ಶನಿವಾರ ಬೆಳಗ್ಗೆ 8ರಿಂದ ಮತದಾನ ಆರಂಭವಾಗಲಿದ್ದು, ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವವರು ಶುಕ್ರವಾರವೇ ಮತಯಂತ್ರಗಳು, ಮತದಾರರ ಪಟ್ಟಿಗಳ ಜತೆ ಬೂತ್​ಗಳಿಗೆ ತೆರಳಿದ್ದಾರೆ. ಚುನಾವಣಾ ಆಯೋಗದ ವರದಿ ಪ್ರಕಾರ, ದೆಹಲಿಯಲ್ಲಿ ಒಟ್ಟು 1,46,92,136 ಮತದಾರರಿದ್ದಾರೆ. ಇದರಲ್ಲಿ 80.55 ಲಕ್ಷ ಪುರುಷರು ಹಾಗೂ 66.35 ಲಕ್ಷ ಮಹಿಳಾ ಮತದಾರರಿದ್ದಾರೆ. ಚುನಾವಣೆಗಾಗಿ ಸುಮಾರು 90 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರತಿ ಜಿಲ್ಲೆಗಳಲ್ಲಿ ಒಂದು ಮತಗಟ್ಟೆಯನ್ನು ಅಂಗಾಂಗ ವೈಫಲ್ಯವಿರುವವರೇ ಸಂಪೂರ್ಣವಾಗಿ ನಿಯಂತ್ರಿಸಲಿದ್ದಾರೆ. 380 ಮತಗಟ್ಟೆಗಳಲ್ಲಿ ಮಹಿಳೆಯರೇ ಸಂಪೂರ್ಣವಾಗಿ ಕಾರ್ಯ ನಿರ್ವಹಿಸಲಿದ್ದು, ಭದ್ರತೆಗೂ ಕೂಡ ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತದಾರರನ್ನು ಆಕರ್ಷಿಸುವ ಸಲುವಾಗಿ ಪ್ರತಿ ಕ್ಷೇತ್ರಗಳಲ್ಲಿ ಒಂದು ಮತಗಟ್ಟೆಯನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಇಲ್ಲಿ ಸಾಮಾನ್ಯ ಬೂತ್​ಗಳಿಗಿಂತ ವೈದ್ಯಕೀಯ ಕಿಟ್, ಗಾಲಿಕುರ್ಚಿಗಳು, ರ‍್ಯಾಂಪ್ ಸೌಲಭ್ಯಗಳನ್ನು ಒದಗಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net