ಭದ್ರತಾ ಸಹಾಯಕರಾಗಲು ಸುವರ್ಣಾವಕಾಶ; ಪಿಯುಸಿ ಕಲಿತವರಿಗೆ ಆದ್ಯತೆ

Job
Published on

ನವದೆಹಲಿ: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ)ದ ಅಧೀನದಲ್ಲಿರುವ ಕಾರ್ಗೊ ಲಾಜಿಸ್ಟಿಕ್​ ಆ್ಯಂಡ್​ ಅಲೈಡ್​ ಸರ್ವೀಸಸ್​ ಲಿಮಿಟೆಡ್​ ಸಂಸ್ಥೆಗೆ ಭದ್ರತಾ ಸಿಬ್ಬಂದಿ ನೇಮಕಾತಿ ಶೀಘ್ರದಲ್ಲಿಯೇ ನಡೆಯಲಿದ್ದು, ಅಧಿಸೂಚನೆ ಹೊರಡಿಸಲಾಗಿದೆ. ಪ್ರಮುಖ ನೇಮಕಾತಿ ವಿವರಗಳನ್ನು ಇಲ್ಲಿ ನೀಡಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಏನು ಹುದ್ದೆ?

ಕಾರ್ಗೊ ಲಾಜಿಸ್ಟಿಕ್​ ಆ್ಯಂಡ್​ ಅಲೈಡ್​ ಸರ್ವೀಸಸ್​ ಲಿಮಿಟೆಡ್​ನ ಭದ್ರತಾ ವಿಭಾಗದಲ್ಲಿ ಒಟ್ಟು 436 ಹುದ್ದೆ ಇದೆ. ನವೆಂಬರ್ 15 ಅರ್ಜಿ ಸಲ್ಲಿಕೆಗೆ ಅಂತಿಮ ದಿನವಾಗಿದೆ.

ಅರ್ಜಿ ಸಲ್ಲಿಕೆ

ಆನ್​ಲೈನ್​ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿ ಜತೆಗೆ ಗುರುತಿನ ಪುರಾವೆ (ಆಧಾರ್​ಕಾರ್ಡ್​, ವೋಟರ್​ಐಡಿ), ವಿದ್ಯಾರ್ಹತೆ ಪುರಾವೆ (10ನೇ ಹಾಗೂ 12ನೇ ತರಗತಿ ಅಂಕಪಟ್ಟಿ/ ಪ್ರಮಾಣಪತ್ರ ಇತ್ಯಾದಿ), ಆರೋಗ್ಯ ಪ್ರಮಾಣ ಪತ್ರ ಸಹಿತ ಹಲವು ಪ್ರಮುಖ ದಾಖಲೆಗಳ ಪ್ರತಿಗಳನ್ನು ಸಲ್ಲಿಸಬೇಕು.

ಅರ್ಹತೆಗಳೇನೇನು?

ವಿದ್ಯಾರ್ಹತೆ: ಅಭ್ಯರ್ಥಿಯು 12ನೇ ತರಗತಿ ತೇರ್ಗಡೆಯಾಗಿರಬೇಕು. ಸಾಮಾನ್ಯ ಅಭ್ಯರ್ಥಿಯು ಶೇ.60 ಅಂಕ ಪಡೆದಿರಬೇಕಿದ್ದು, ಎಸ್ಸಿ/ಎಸ್ಟಿ ಸಹಿತ ಹಿಂದುಳಿದ ವರ್ಗದ ಅಭ್ಯರ್ಥಿಗಳು ಶೇ. 55 ಅಂಕ ಪಡೆದಿರಬೇಕು. ಜತೆಗೆ ಇಂಗ್ಲಿಷ್​ ಹಾಗೂ ಹಿಂದಿ ಭಾಷೆಯಲ್ಲಿ ಸಂವಹನ ನಡೆಸಲು ಸಮರ್ಥರಿರಬೇಕಿದ್ದು, ಸ್ಥಳಿಯ ಭಾಷೆ ಮೇಲೆ ಹಿಡಿತವಿರಬೇಕು.

ವಯೋಮಿತಿ: ಅಭ್ಯರ್ಥಿಯ ವಯಸ್ಸು ಗರಿಷ್ಠ 27 ವರ್ಷ ಅಥವಾ ಅದರೊಳಗಿರಬೇಕು.

ಅಭ್ಯರ್ಥಿ ಆಯ್ಕೆ: ಪ್ರಾಥಮಿಕ ಹಂತವಾಗಿ ಅಭ್ಯರ್ಥಿಗಳನ್ನು ಶಾರ್ಟ್​ಲಿಸ್ಟ್​ ಮಾಡಲಾಗುತ್ತದೆ. ಇದನ್ನು ಇಮೇಲ್​ ಮೂಲಕ ಅಭ್ಯರ್ಥಿಗಳಿಗೆ ತಿಳಿಸಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಯನ್ನು ನಿರ್ದಿಷ್ಟ ದಿನದಂದು ನೇರ ಸಂದರ್ಶನಕ್ಕೆ ಕರೆಯಲಾಗುತ್ತದೆ.

ಶುಲ್ಕ ಪಾವತಿ: ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಯು 500 ರೂ. ಅರ್ಜಿ ಶುಲ್ಕ ಪಾವತಿಸಬೇಕಿದ್ದು, ಎಸ್ಸಿ/ಎಸ್ಟಿ ಸಹಿತ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 100 ರೂ. ಶುಲ್ಕ ವಿಧಿಸಲಾಗಿದೆ. ಅಭ್ಯರ್ಥಿಗಳು ಆನ್​ಲೈನ್​ನಲ್ಲಿ ಮಾತ್ರ ಶುಲ್ಕ ಪಾವತಿಸಬೇಕು.

ವೇತನ ಶ್ರೇಣಿ: ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕವಾಗಿ ಗೌರವಧನ ನೀಡಲಾಗುತ್ತದೆ. ಮೊದಲ ವರ್ಷ 21,500 ರೂ., ಎರಡನೇ ವರ್ಷ 22,000 ರೂ. ಹಾಗೂ ಮೂರನೇ ವರ್ಷ 22,500 ರೂ. ವೇತನ ನಿಗದಿಪಡಿಸಲಾಗಿದೆ.

3 ವರ್ಷಕ್ಕೆ ಗುತ್ತಿಗೆ

ಕಾರ್ಗೊ ಲಾಜಿಸ್ಟಿಕ್​ ಆ್ಯಂಡ್​ ಅಲೈಡ್​ ಸರ್ವೀಸಸ್​ ಲಿಮಿಟೆಡ್​ನ ಭದ್ರತಾ ವಿಭಾಗಕ್ಕೆ ಆಯ್ಕೆಯಾದ ಸಹಾಯಕನು ಮೂರು ವರ್ಷದ ಅವಧಿಗೆ ಗುತ್ತಿಗೆಗೆ ಒಳಪಟ್ಟಿರುತ್ತಾನೆ.

ಸಿಬ್ಬಂದಿಯ ಕರ್ತವ್ಯಗಳೇನು?

ಭದ್ರತಾ ವಿಭಾಗದ ಸಿಬ್ಬಂದಿಯು ಪ್ರಯಾಣಿಕರಿಗೆ ಸಂಬಂಧಿಸಿದ ಲಗೇಜ್​ಗಳ ತಪಾಸಣೆ, ವಿಮಾನಕ್ಕೆ ಲೋಡಿಂಗ್​, ಅನ್​ಲೋಡಿಂಗ್​ ಸಹಿತ ಹಲವು ಕರ್ತವ್ಯಗಳನ್ನು ನಿರ್ವಹಿಸಬೇಕಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net