

ನವದೆಹಲಿ: ಸಿಬ್ಬಂದಿ ನೇಮಕ ಆಯೋಗ (ಎಸ್ಎಸ್ಸಿ) ನೇಮಕಾತಿ ಪರೀಕ್ಷೆಗಳಲ್ಲಿ ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣವನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಮೇ ತಿಂಗಳಿಂದ ನಡೆಯುವ ಎಸ್ಎಸ್ಸಿಯ ನೇಮಕಾತಿ ಪರೀಕ್ಷೆಗಳಲ್ಲಿ ಆಧಾರ್ ದೃಢೀಕರಣ ಜಾರಿಗೆ ಬರಲಿದೆ. ಅಭ್ಯರ್ಥಿಗಳು ಆನ್ಲೈನ್ ರಿಜಿಸ್ಟ್ರೇಷನ್ ವೇಳೆ ಅರ್ಜಿ ತುಂಬಿ ದೃಢೀಕರಣ ಮಾಡಿಕೊಳ್ಳಬೇಕು. ಆ ಬಳಿಕ ಪರೀಕ್ಷಾ ಕೇಂದ್ರಗಳಲ್ಲೂ ದೃಢೀಕರಣ ಮಾಡಬೇಕು. ಇದು ಸ್ವಯಂ ಪ್ರೇರಿತವಾಗಿದೆ, ಪರೀಕ್ಷಾ ಪ್ರಕ್ರಿಯೆಯನ್ನು ಸರಳಗೊಳಿಸಲು ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಎಸ್ಎಸ್ಸಿ ತಿಳಿಸಿದೆ. ಆಧಾರ್ ದೃಢೀಕರಣದಿಂದಾಗಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ತಮ್ಮ ಗುರುತನ್ನು ನಕಲಿ ಮಾಡದಂತೆ ಹಾಗೂ ಆಯೋಗ ನಡೆಸುವ ನೇಮಕಾತಿ ಪರೀಕ್ಷೆಗಳಲ್ಲಿ ಮೋಸದ ವಿಧಾನಗಳನ್ನು ಬಳಸದಂತೆ ತಡೆಯಲು ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಸ್ಎಸ್ಸಿ ಕೇಂದ್ರ ಸರ್ಕಾರದ ಅತಿದೊಡ್ಡ ನೇಮಕಾತಿ ಸಂಸ್ಥೆಗಳಲ್ಲಿ ಒಂದಾಗಿದೆ. ಆಯೋಗ ವಿವಿಧ ಸಚಿವಾಲಯಗಳು, ಇಲಾಖೆಗಳಲ್ಲಿ ನಾನ್ ಗೆಜೆಟೆಡ್ ಹುದ್ದೆಗಳ ನೇಮಕಾತಿಗಳಿಗೆ ಪರೀಕ್ಷೆ ನಡೆಸುತ್ತದೆ. ಎಸ್ಎಸ್ಸಿಯಂತೆ ಯುಪಿಎಸ್ಸಿಯಲ್ಲೂ ಆಧಾರ್ ಆಧಾರಿತ ದೃಢೀಕರಣ ಪ್ರಕ್ರಿಯೆ ಬಳಕೆಯಲ್ಲಿದೆ. ಪರೀಕ್ಷೆಯಲ್ಲಿ ಅಕ್ರಮವನ್ನು ತಡೆಯಲು ಮುಖ ಗುರುತಿಸುವ ಮತ್ತು ಕೃತಕ ಬುದ್ಧಿಮತ್ತೆಯ ಸಿಸಿಟಿವಿ ಕ್ಯಾಮರಾ ವ್ಯವಸ್ಥೆ ಅಳವಡಿಸಿಕೊಳ್ಳಲು ಯುಪಿಎಸ್ಸಿ ಕಳೆದ ವರ್ಷ ನಿರ್ಧರಿಸಿತ್ತು.