

ರಾಣೆಬೆನ್ನೂರ: ನಗರದ ಬಿಎಸ್‌ಎನ್‌ಎಲ್ ಕಚೇರಿಯಲ್ಲಿ ಬಂದ್ ಆಗಿರುವ ಆಧಾರ್ ತಿದ್ದುಪಡಿ ಸೇವಾ ಕೇಂದ್ರವನ್ನು ಪುನಃ ಆರಂಭಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ಹುಲ್ಲತ್ತಿ ಗ್ರಾಮದ ವಂದೇ ಮಾತರಂ ಸ್ವಯಂ ಸೇವಾ ಸಮಿತಿ ವತಿಯಿಂದ ಬಿಎಸ್‌ಎನ್‌ಎಲ್ ಉಪ ವಿಭಾಗದ ಇಂಜಿನಿಯರ್ ಹನುಮಂತಪ್ಪ ಪಾರ್ವತೇರ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಈ ಹಿಂದೆ ಸೇವಾ ಕೇಂದ್ರದಲ್ಲಿದ್ದ ಸಿಬ್ಬಂದಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅವರ ಏಜೆನ್ಸಿ ಪರವಾನಗಿ ರದ್ದು ಪಡಿಸಲಾಗಿದೆ. ಹೀಗಾಗಿ ಕಳೆದ ಒಂದು ವಾರದಿಂದ ಸೇವಾ ಕೇಂದ್ರ ಬಂದ್ ಮಾಡಲಾಗಿದೆ. ಇದರಿಂದಾಗಿ ಸಾರ್ವಜನಿಕರಿಗೆ ಆಧಾರ್ ತಿದ್ದುಪಡಿ ಮಾಡಿಸಲು ತೊಂದರೆ ಉಂಟಾಗಿದೆ.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ಆಧಾರ್ ತಿದ್ದುಪಡಿ ಕೇಂದ್ರವನ್ನು ಬೇರೆಯವರಿಗೆ ಕೊಟ್ಟು ಪುನಃ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮಸ್ಥರಾದ ಜದಗೀಶ ಹುಲ್ಲತ್ತಿ, ಯಲ್ಲಪ್ಪ ಚಿಕ್ಕಣ್ಣನವರ, ಮಂಜುನಾಥ ಹಾವೇರಿ, ಪ್ರದೀಪ ಚಲವಾದಿ, ಮನಿಕಂಠ ಎಸ್.ಕೆ., ರವಿ ಕೆರೂಡಿ, ಎಂ.ಬಿ. ವಡ್ಡರ, ಹುಲಿಗೆಪ್ಪ ವಿ.ಸಿ., ಸುಭಾಸ ಕೆಂಚಪ್ಪನವರ, ರವಿ ಅರ್ಕಾಚಾರಿ, ನಾಗರಾಜ ಓಲೇಕಾರ ಮತ್ತಿತರರು ಪಾಲ್ಗೊಂಡಿದ್ದರು.