ಮೈದಾನಕ್ಕೆ ಅತಿಕ್ರಮ ಪ್ರವೇಶಿಸಿದ್ದ ಯುವಕನಿಗೆ ಥಳಿತ: ಮಾನವ ಹಕ್ಕುಗಳ ಆಯೋಗಕ್ಕೆ ದೂರು

Crime Logo
Published on

ಬೆಂಗಳೂರು: ಇತ್ತೀಚೆಗೆ ನಡೆದ ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಐಪಿಎಲ್ ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಅತಿಕ್ರಮ ಪ್ರವೇಶಿಸಿದ್ದ ಯುವಕನ ಮೇಲೆ ಭದ್ರತಾ ಸಿಬ್ಬಂದಿ ಥಳಿಸಿರುವುದನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಮರಿಲಿಂಗೇಗೌಡ ಮಾಲಿ ಪಾಟೀಲ್ ಎಂಬುವರು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.

ಕಳೆದ ಮಾ. ೨೫ರಂದು ಪಂದ್ಯ ನಡೆಯುವಾಗ ಮೈದಾನಕ್ಕೆ ನುಗ್ಗಿ ಬ್ಯಾಟಿಂಗ್ ಆಡಲು ಬರುತ್ತಿದ್ದ ವಿರಾಟ್ ಕೊಹ್ಲಿ ಕಾಲಿಗೆ ಬಿದ್ದು ನಮಸ್ಕರಿಸಿದ್ದ ರಾಯಚೂರು ಮೂಲದ ಅಪ್ರಾಪ್ತನನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ್ದರು. ಬಂಧನಕ್ಕೂ ಮುನ್ನ ಮೈದಾನದಿಂದ ಯುವಕನನ್ನು ಹೊರಕರೆದುಕೊಂಡು ಸಾವಿರಾರು ಜನರ ಮುಂದೆ ಭದ್ರತಾ ಸಿಬ್ಬಂದಿ ಮನಸೋ ಇಚ್ಚೆ ಥಳಿಸಿದ್ದರು. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಥಳಿತದ ವಿಡಿಯೊ ವೈರಲ್ ಆಗಿತ್ತು. ಹಿಗ್ಗಾಮುಗ್ಗ ಥಳಿಸಿರುವ ಬಗ್ಗೆ ಪ್ರಶ್ನಿಸಿ ಮರಿಲಿಂಗೇಗೌಡ ಅವರು ಭದ್ರತಾ ನಿಯಮ ಉಲ್ಲಂಘಿಸಿ ಮೈದಾನಕ್ಕೆ ನುಗ್ಗಿರುವುದು ಅಪರಾಧ. ಕಾನೂನು ಪ್ರಕಾರ ಪೊಲೀಸರು ಕ್ರಮ ಕೈಗೊಳ್ಳಬೇಕು. ಆದರೆ ಮೈದಾನದ ಭದ್ರತಾ ಸಿಬ್ಬಂದಿ ಸಾವಿರಾರು ಜನರ ಮುಂದೆ ಯುವಕನನ್ನು ಥಳಿಸಿರುವುದು ಸರಿಯಲ್ಲ. ಮನಸೋ ಇಚ್ಚೆ ಥಳಿಸಲು ಅಧಿಕಾರ ನೀಡಿದವರು ಯಾರು ? ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಕರಣ ಸಂಬಂಧ ಭದ್ರತೆ ಉಸ್ತುವಾರಿ ವಹಿಸಿಕೊಂಡ ಸಂಸ್ಥೆ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ), ಅಧ್ಯಕ್ಷರು, ಕಾರ್ಯದರ್ಶಿ, ಗ್ರೌಂಡ್ ಇನ್ ಚಾರ್ಜ್ ಹಾಗೂ ಪೊಲೀಸರನ್ನು ವಿಚಾರಣೆ ನಡೆಸಬೇಕು. ಸಾವಿರಾರು ಜನರ ಮುಂದೆ ಯುವಕನನ್ನು ಥಳಿಸಿದ ವ್ಯಕ್ತಿಗಳು ಯಾರು ? ಹಲ್ಲೆಗೊಳಗಾದ ಯುವಕನಿಗೆ ಕೆಎಸ್‌ಸಿಎ ವತಿಯಿಂದ ವೈದ್ಯಕೀಯ ಚಿಕಿತ್ಸೆ ನೀಡಿದ್ದಾರೆಯೇ? ವ್ಯಕ್ತಿಯನ್ನು ಥಳಿಸಿ ಕೆಎಸ್‌ಸಿಎ ಸೂಚನೆ ನೀಡಿತ್ತಾ ? ಸೇರಿದಂತೆ ಸಮಗ್ರ ತನಿಖೆ ನಡೆಸಬೇಕೆಂದು ದೂರಿನಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net