

Dakshina : ವ್ಯಕ್ತಿಯೊಬ್ಬ ದಕ್ಷಿಣೆ ನೀಡಿ ಎಣ್ಣೆ ಬಾಟಲ್ ಖರೀದಿ ಮಾಡಿದ ಅಪರೂಪದ ಹಾಗೂ ಹಾಸ್ಯಮಯ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ. ಆ ವ್ಯಕ್ತಿ ದಕ್ಷಿಣೆ ನೀಡಲು ಒಂದು ವಿಶೇಷ ಕಾರಣ ಕೂಡ ಇದೆ.
ಅಂದಹಾಗೆ, ಕೊಟ್ಟಾಯಂನ ಪೊಂಕುನ್ನಾಥ್ನಲ್ಲಿ ಬೇವರೇಜ್ ಶಾಪ್ (ಪಾನೀಯ ನಿಗಮ) ನಿನ್ನೆ ಬೆಳಗ್ಗೆ ತನ್ನ ಬಾಗಿಲನ್ನು ತೆರೆಯಿತು. ಈ ವೇಳೆ ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಬಾಟಲಿಯನ್ನು ಖರೀದಿಸಿದ ಬಳಿಕ ಶಾಪ್ ಸಿಬ್ಬಂದಿಗೆ ದಕ್ಷಿಣೆ ನೀಡಿ ಸಂಭ್ರಮಿಸಿದರು. ವೀಳ್ಯದೆಲೆ, ಅಡಿಕೆ ಮತ್ತು ಹಣವನ್ನು ದಕ್ಷಿಣೆಯಾಗಿ ನೀಡಿದನು.
ಇದಕ್ಕೆ ಕಾರಣ ಏನಿರಬಹುದು ಅಂತ ನೋಡಿದಾಗ, ದೀರ್ಘ ಸಮಯದ ಬಳಿಕ ಎಣ್ಣೆ ಅಂಗಡಿ ಓಪನ್ ಮಾಡಿದ ಖುಷಿಯಲ್ಲಿ ಆ ವ್ಯಕ್ತಿ ಈ ರೀತಿ ಮಾಡಿದ್ದಾನೆ. ಹೌದು, ಪೊಂಕುನ್ನಾಥ್ನಲ್ಲಿರುವ ಬೇವರೇಜ್ ಮಳಿಗೆಯನ್ನು ಕಳೆದ ವರ್ಷ ತಾಂತ್ರಿಕ ಕಾರಣಗಳಿಂದ ಮುಚ್ಚಲಾಗಿತ್ತು. ಸೋಮವಾರ (ಆಗಸ್ಟ್ 25) ಬೆಳಗ್ಗೆ ಮತ್ತೆ ತೆರೆಯಲಾಯಿತು. ಮಳಿಗೆ ಇರುವ ಪ್ರದೇಶದಲ್ಲಿ ವಾಸಿಸುವ ರಂಜು ಎಂಬಾತ ತನ್ನ ಸಂತೋಷವನ್ನು ವ್ಯಕ್ತಪಡಿಸಲು ಈ ವಿಭಿನ್ನವಾದ ಕ್ರಮವನ್ನು ಆಯ್ದುಕೊಂಡನು.
ಮತ್ತೆ ಓಪನ್ ಮಾಡಿರುವ ಬೇವರೇಜ್ ಶಾಪ್ನಿಂದ ಮೊದಲ ಬಾಟಲಿಯನ್ನು ಖರೀದಿಸಲು ರಂಜು ಅವರು ತಮ್ಮ ಕೈಯಲ್ಲಿ ದಕ್ಷಿಣೆ ಹಿಡಿದು ಬಂದಿದ್ದರು. ಈ ಎಣ್ಣೆ ಅಂಗಡಿಯನ್ನು ಯಾವುದೇ ಕಾರಣಕ್ಕೆ ಇನ್ನು ಮುಂದೆ ಮುಚ್ಚಬಾರದು ಎಂಬುದು ರಂಜು ಅವರ ಪ್ರಾರ್ಥನೆಯಾಗಿದೆ. ಕೇವಲ ರಂಜು ಪ್ರಾರ್ಥನೆ ಮಾತ್ರವಲ್ಲ ಅನೇಕ ಸ್ಥಳೀಯ ಜನರ ಪ್ರಾರ್ಥನೆ ಕೂಡ ಆಗಿದೆ.
ಅಂದಹಾಗೆ, ಪೊಂಕುನ್ನಾಥ್ ಬೇವರೇಜ್ ಶಾಪ್ ಮುಚ್ಚಿದಾಗ, ಪಾಲಾ, ಎರುಮೇಲಿ ಮತ್ತು ಪಲ್ಲಿಕಥೋಡ್‌ನಿಂದ ಸಾಕಷ್ಟು ಮಂದಿ ಮದ್ಯ ಖರೀದಿಸಲು ಬಹಳ ದೂರ ಪ್ರಯಾಣಿಸುತ್ತಿದ್ದರು. ಈ ವಿಚಾರವನ್ನು ಶಾಪ್ ಉದ್ಘಾಟನೆಯಲ್ಲಿ ಭಾಗವಹಿಸಿದ್ದವರು ಹೇಳಿದ್ದಾರೆ. ಇನ್ನು ಮುಂದೆ ಮುಚ್ಚದಂತೆ ಮನವಿ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್)