ಪೊಲೀಸ್ ಠಾಣೆ ಕೂಗಳತೆಯಲ್ಲೇ ಯುವಕನ ಕೊಲೆ

ajitha
Published on

ಬೆಂಗಳೂರು: ಶೇಷಾದ್ರಿಪುರ ಪೊಲೀಸ್ ಠಾಣೆ ಕೂಗಳತೆ ದೂರದಲ್ಲಿ ಹಾಡಹಗಲೇ ಯುವಕನ ಮೇಲೆ ಹಂತಕರ ಗ್ಯಾಂಗ್ ಮಾರಕಾಸಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದೆ.

ಶೇಷಾದ್ರಿಪುರದ ರಶಿಲ್ಲಾರ್ ಸ್ಟ್ರೀಟ್ ನಿವಾಸಿ ಅಜಿತ್ ಕುಮಾರ್ (27) ಮೃತ. ಗುರುವಾರ ಮಧ್ಯಾಹ್ನ 4 ಗಂಟೆಯಲ್ಲಿ ಮನೆಯ ಸಮೀಪವೇ ಅಜಿತ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಕ್ತ ನಿಧಿ ಕೇಂದ್ರದಲ್ಲಿ ಅಜಿತ್‌ಕುಮಾರ್ ಕೆಲಸ ಮಾಡಿಕೊಂಡು ಪಾಲಕರೊಂದಿಗೆ ನೆಲೆಸಿದ್ದ. ಕೆಲಸಕ್ಕೆ ಹೋಗಿದ್ದ ಅಜಿತ್, ಊಟಕ್ಕೆಂದು ಮನೆಗೆ ಬಂದಿದ್ದ. ಊಟ ಮಾಡಿಕೊಂಡು ಮನೆಯಿಂದ ಹೊರಗೆ ಬಂದು ಹೋಗುತ್ತಿದ್ದಾಗ ಏಕಾಏಕಿ ದುಷ್ಕರ್ಮಿಗಳು ಮಾರಕಾಸಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವ ಉಂಟಾಗಿ ಅಜಿತ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಶೇಷಾದ್ರಿಪುರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಇದೇ ವೇಳೆ ಸ್ಥಳಕ್ಕೆ ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಸಹ ಭೇಟಿ ನೀಡಿದ್ದರು.

2022ರಲ್ಲಿ ನಡೆದಿದ್ದ ಗಣೇಶ್ ಎಂಬಾತನ ಕೊಲೆ ಪ್ರಕರಣದಲ್ಲಿ ಅಜಿತ್ ಮತ್ತು ಆತನ ಸಹೋದರ ಆರೋಪಿಗಳಾಗಿದ್ದರು. ಜಾಮೀನು ಪಡೆದು ಹೊರಬಂದಿದ್ದರು. ನಂತರ ಏರಿಯಾದ ಮೇಲೆ ಹಿಡಿತ ಸಾಧಿಸಲು ಅಜಿತ್ ಪ್ರಯತ್ನಿಸುತ್ತಿದ್ದ ಎನ್ನಲಾಗಿದೆ. ಇದೇ ದ್ವೇಷಕ್ಕೆ ಗಣೇಶ್ ಬೆಂಬಲಿಗರು ಕೃತ್ಯ ಎಸಗಿರುವ ಸಾಧ್ಯತೆಗಳಿವೆ. ಮರಣೋತ್ತರ ಪರೀಕ್ಷೆಗೆ ಶವವನ್ನು ಬೌರಿಂಗ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕೃತ್ಯ ನಡೆದ ಸ್ಥಳದ ಸುತ್ತಮುತ್ತಲ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲನೆ ನಡೆಸುತ್ತಿದ್ದು, ಆರೋಪಿಗಳ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಡಿಸಿಪಿ ಶೇಖರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net