

ಜನಪ್ರಿಯ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಒಂದುವರುಷದ ಯಶಸ್ವಿ ಆಡಳಿತ ಪೂರೈಸಿದ್ದಕ್ಕಾಗಿ ಅವರನ್ನು ನಾಡಿನ ಜನತೆ ಅಭಿನಂದಿಸುವ ಅಪೂರ್ವ ಸಂದರ್ಭ ಒದಗಿಬಂದಿದೆ. ಇದೇ ಜುಲೈ 26ಕ್ಕೆ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಒಂದು ವರ್ಷವಾಗಿದೆ. ಕನ್ನಡನಾಡಿನ ಇತಿಹಾಸದಲ್ಲಿ ಒಂದು ವರುಷದ ಆಡಳಿತವನ್ನು ಜನಮೆಚ್ಚುವಂತೆ ನಿರ್ವಹಿಸುವುದು ವಿಶೇಷವೇನಲ್ಲ. ದಕ್ಷ ಮತ್ತು ಪಾರದರ್ಶಕ ಆಡಳಿತಕ್ಕೆ ನಮ್ಮ ನಾಡು ಇಡೀ ಭಾರತದಲ್ಲೇ ಹೆಸರುವಾಸಿ. ಖ್ಯಾತನಾಮರಾದ ಜನನಾಯಕರಲ್ಲಿ, ಮುಖ್ಯಮಂತ್ರಿಗಳಲ್ಲಿ ಇಂದಿನ ಮುಖ್ಯಮಂತ್ರಿಗಳು ಮುಂಚೂಣಿಯಲ್ಲಿದ್ದಾರೆ. ಹಲವು ಸವಾಲು, ಸಂಕಷ್ಟಗಳನ್ನು ಯಶಸ್ವಿಯಾಗಿ ಗೆದ್ದು ಬಂದಿದ್ದಾರೆ.
ಹಿಂದೆಂದೂ ಕಂಡು, ಕೇಳರಿಯದಷ್ಟು ಕಷ್ಟ ಸಂಕೋಲೆಗಳನ್ನು ಕರ್ನಾಟಕ ಈ ಒಂದು ವರುಷದ ಅವಧಿಯಲ್ಲಿ ಅನುಭವಿಸಿದೆ. ಬರ, ಅತಿವೃಷ್ಟಿ ಸೇರಿ ಹಲವು ಸಂಕಷ್ಟಗಳು ಸಾಲುಸಾಲಾಗಿ ನಾಡಿನ ಜನಜೀವನವನ್ನು ಘಾಸಿಗೊಳಿಸಿವೆ. ಸಾಂಕ್ರಾಮಿಕ ಹೆಮ್ಮಾರಿ ಕರೊನಾ ರಾಜ್ಯಾದ್ಯಂತ ಜನಾರೋಗ್ಯವನ್ನು ಅಲ್ಲೋಲಕಲ್ಲೋಲ ಮಾಡಿದೆ. ರಾಜ್ಯ ಸರ್ಕಾರ ಬರಪರಿಸ್ಥಿತಿಯನ್ನು ಎದುರಿಸಿ ನೆರೆಸಂತ್ರಸ್ತರಿಗೆ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಿತು. ಸುರಕ್ಷಿತ ಸ್ಥಳಗಳಿಗೆ ಸಾಗಿಸಿ 4485 ಕೋಟಿ ರೂ. ವೆಚ್ಚದಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಂಡಿತು.
ಅತಿವೃಷ್ಟಿಯಿಂದ ರಾಜ್ಯಕ್ಕೆ -35 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ನಷ್ಟವಾಯಿತು. ಮುಖ್ಯಮಂತ್ರಿಗಳು ಪ್ರವಾಹ ಪರಿಹಾರ ಮಾರ್ಗಸೂಚಿ ಅನ್ವಯ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ 1869 ಕೋಟಿ ರೂ. ಅನುದಾನ ಪಡೆಯುವಲ್ಲಿ ಯಶಸ್ವಿಯಾದರು. ಇದಾದ ಬಳಿಕ 2020ರ ಮಾರ್ಚ್ನಿಂದ ವಿಶ್ವದಾದ್ಯಂತ ಹರಡಿರುವ ಕರೊನಾ ಸಾಂಕ್ರಾಮಿಕ ಕರ್ನಾಟಕಕ್ಕೂ ವ್ಯಾಪಿಸಿದೆ. ಕರೊನಾ ತಡೆಗಟ್ಟಲು ಕರ್ನಾಟಕ ಸರ್ಕಾರ ಕೈಗೊಂಡಿರುವ ವ್ಯಾಪಕ ಜನಾರೋಗ್ಯ ಕಾರ್ಯಕ್ರಮಗಳನ್ನು ವಿವರಿಸುವ ಮುನ್ನ ವಿವಿಧ ಕ್ಷೇತ್ರಗಳಲ್ಲಿ 2019 ಮತ್ತು 2020ರ ಸಾಲಿನಲ್ಲಿ ಸಾಧಿಸಿದ ಯಶಸ್ವಿ ಕಾರ್ಯಯೋಜನೆಗಳನ್ನು ನೋಡೋಣ.
ಪರಿಶಿಷ್ಟ ಮಕ್ಕಳ ಬಗೆಗೆ ಗಮನ: ಕರ್ನಾಟಕ ಸರ್ಕಾರದ ಇಂದಿನ ಆದ್ಯತೆಗಳ ಪೈಕಿ ಮುಖ್ಯವಾದದ್ದು ಪರಿಶಿಷ್ಟ ಜಾತಿ ವರ್ಗಗಳ ಮಕ್ಕಳಿಗೆ ಶಿಕ್ಷಣ ಸೌಲಭ್ಯಗಳ ಪೂರೈಕೆ. 2019-20ರ ಅವಧಿಯಲ್ಲಿ ಪರಿಶಿಷ್ಟ ಜಾತಿ ವರ್ಗದ 47 ವಸತಿ ಶಾಲೆಗಳ ಕಾಮಗಾರಿ ಮತ್ತು 96 ಹಾಸ್ಟೆಲ್ಗಳ ನಿರ್ವಣದಿಂದಾಗಿ ಈ ವರ್ಷ 12 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಸೂಕ್ತ ಆಹಾರದ ಜತೆಗೆ ಓದಲು ವ್ಯವಸ್ಥೆ ಮಾಡಲಾಯಿತು. ಇದಕ್ಕಾಗಿ ತಗುಲಿದ ವೆಚ್ಚ 995 ಕೋಟಿ ರೂ. ಇದೇ ಅವಧಿಯಲ್ಲಿ 181 ವಸತಿ ಶಾಲೆಗಳು ಮತ್ತು 141 ಹಾಸ್ಟೆಲ್ಗಳಿಗೆ ಶಾಶ್ವತ ಕಟ್ಟಡ ನಿರ್ವಿುಸಲು ಸರ್ಕಾರ ಮುಂದಾಯಿತು. ಸಮಾಜ ಕಲ್ಯಾಣ ಇಲಾಖೆ 3.71 ಲಕ್ಷ ಬಡಮಕ್ಕಳಿಗೆ ಸಮವಸ್ತ್ರ, ಶೂ ಮತ್ತಿತರ ಸೌಲಭ್ಯ ಒದಗಿಸುತ್ತಿದೆ.
ವಿಶೇಷ ಸಂಗತಿ: ರಾಜ್ಯ ಸರ್ಕಾರದ ಹಾಸ್ಟೆಲ್ ಮತ್ತು ವಸತಿ ಶಾಲೆಗಳ ಮಕ್ಕಳು ವಾರ್ಷಿಕ ಪರೀಕ್ಷೆಗಳಲ್ಲಿ ಅಸಾಧಾರಣ ಸಾಧನೆ ಮಾಡಿದ್ದಾರೆ. ರಾಜ್ಯದ ಸರಾಸರಿ ಉತ್ತೀರ್ಣ ಶೇಕಡ 61 ಇದ್ದರೆ, ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಸರಾಸರಿ ಉತ್ತೀರ್ಣ ಪ್ರಮಾಣ ಶೇ.86. ರಾಜ್ಯ ಸರ್ಕಾರದ ಮತ್ತೊಂದು ಸಾಧನೆಯೆಂದರೆ ಪರಿಶಿಷ್ಟ ಜಾತಿ ವರ್ಗದ 11,377 ಫಲಾನುಭವಿಗಳಿಗೆ 400 ಕೋಟಿ ರೂ.ಗಳನ್ನು ಸ್ವಯಂ ಉದ್ಯೋಗಕ್ಕಾಗಿ ಬಿಡುಗಡೆ ಮಾಡಲಾಗಿದೆ. ಅಂತೆಯೇ ಭೂಮಿ ಖರೀದಿಯಲ್ಲೂ ವಿಶೇಷ ಪ್ರಗತಿ ಸಾಧ್ಯವಾಗಿದೆ. 2100 ಕುಟುಂಬಗಳಿಗೆ -ಠಿ; 260 ಕೋಟಿ ವೆಚ್ಚದಲ್ಲಿ 2800 ಎಕರೆ ಭೂಮಿಯನ್ನು ಸರ್ಕಾರ ಖರೀದಿಸಿ ವಿತರಿಸಿದೆ. ಪರಿಶಿಷ್ಟ ಜಾತಿ/ಪಂಗಡದ ರೈತರ ಕೃಷಿಭೂಮಿಗೆ ಕೊಳವೆಬಾವಿ ಸೌಲಭ್ಯ ಒದಗಿಸಲು ಆದ್ಯತೆ ನೀಡಲಾಗಿದೆ. ಗಂಗಾಕಲ್ಯಾಣ ಯೋಜನೆಯಡಿ 8517 ಕೊಳವೆಬಾವಿ ನಿರ್ಮಾಣಗೊಂಡಿವೆ.
ಜಲಮಟ್ಟ ಏರಿಕೆ: ಮಹದಾಯಿ ಜಲವಿವಾದ ನ್ಯಾಯಾಧಿಕರಣದ ತೀರ್ಪು ಕರ್ನಾಟಕಕ್ಕೆ ಅನುಕೂಲ ಒದಗಿಸಿದೆ. ತೀರ್ಪಿನ ಫಲವಾಗಿ ಒದಗುವ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಯೋಜನೆಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ವಿಶೇಷ ಗಮನ ನೀಡಿದ್ದಾರೆ. ಮಹದಾಯಿ ಅಲ್ಲದೆ ಕೃಷ್ಣಾ ಮೇಲ್ದಂಡೆ ಯೋಜನೆ, ಮೇಕೆದಾಟು, ಭದ್ರಾ ಯೋಜನೆ ಸೇರಿ ಹಲವು ನೀರಾವರಿ ಯೋಜನೆಗಳ ತ್ವರಿತ ನಿರ್ವಣಕ್ಕೆ ಗಮನ ನೀಡಲಾಗುತ್ತಿದೆ. 15,424 ಹೆಕ್ಟರ್ ಜಮೀನಿಗೆ ನೀರಾವರಿ ಸೌಲಭ್ಯ ಮತ್ತು ರಾಜ್ಯದ ಉದ್ದಗಲ 1130 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ.
ಹೆಚ್ಚಿದ ನೀರಾವರಿ ಸಾಮರ್ಥ್ಯ: ರೈತರಿಗೆ ನೆಮ್ಮದಿ ತಂದಿರುವ ಸರ್ಕಾರದ ಮತ್ತೊಂದು ಸಾಧನೆಯೆಂದರೆ 2019-20ನೇ ಸಾಲಿನಲ್ಲಿ ರಾಜ್ಯದಲ್ಲಿ 15,424 ಹೆಕ್ಟರ್ ಜಮೀನಿಗೆ ಲಭ್ಯವಾಗಿರುವ ನೀರಾವರಿ ಸೌಲಭ್ಯ. ಪ್ರಮುಖವಾಗಿ ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಕೊಪ್ಪಳ ಜಿಲ್ಲೆಯಲ್ಲಿ 45 ಕೆರೆಗಳು, ಬಾಗಲಕೋಟೆ ಜಿಲ್ಲೆಯಲ್ಲಿ 15 ಮತ್ತು ಗದಗ ಜಿಲ್ಲೆಯಲ್ಲಿ 12 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗಳು ನಡೆದಿವೆ. ಈ ಯೋಜನೆಗೆ 1864 ಕೋಟಿ ರೂ. ಕಾಯ್ದಿರಿಸಲಾಗಿತ್ತು. ವಾಣಿವಿಲಾಸ ಸಾಗರದಿಂದ ಚಿತ್ರದುರ್ಗ ಜಿಲ್ಲೆಯ 12 ಕೆರೆಗಳು, ಭದ್ರಾ ಮೇಲ್ದಂಡೆ ಯೋಜನೆಯಡಿ ಚಳ್ಳಕೆರೆ ತಾಲ್ಲೂಕಿನ 58 ಕೆರೆ, ಮೊಳಕಾಲ್ಮೂರು ಮತ್ತು ಪಾವಗಡ ತಾಲ್ಲೂಕಿಗೆ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಶಿವಮೊಗ್ಗ ಮತ್ತು ಸೊರಬ ತಾಲ್ಲೂಕಿನ ಕೆರೆಗಳಿಗೆ, ಹೊಸಪೇಟೆ, ಭರಮಸಾಗರ, ಹಾನಗಲ್ಲು, ಬ್ಯಾಡಗಿ, ಹಿರೇಕೆರೂರು, ಮುಂಡಗೋಡು, ಬೆಳಗಾವಿ, ಚಿಕ್ಕನಾಯಕನಹಳ್ಳಿಯ ಚಾಮರಾಜಪುರ ಕೆರೆ ಮತ್ತು ರಾಯಚೂರು ಜಿಲ್ಲೆಯ ಗಣೇಕಲ್ ಜಲಾಶಯಕ್ಕೆ ಇದೇ ರೀತಿ ನೀರು ತುಂಬಿಸುವ ಯೋಜನೆಗಳು ಸರ್ಕಾರದ ಕಾರ್ಯಕ್ರಮದಲ್ಲಿ ಸೇರಿವೆ. ಕುಸಿಯುತ್ತಿರುವ ಭೂಗರ್ಭದ ಜಲಮಟ್ಟವನ್ನು ಮೇಲೆತ್ತಿ, ರೈತರಿಗೆ ನೆರವಾಗುವ ಕಳಕಳಿ ಯಡಿಯೂರಪ್ಪನವರದ್ದು. ಹೀಗಾಗಿ ಇನ್ನು ಮುಂದೆ ರಾಷ್ಟ್ರೀಯ ಇಲ್ಲವೆ ರಾಜ್ಯ ಹೆದ್ದಾರಿಗಳಲ್ಲಿ ನಿರ್ವಿುಸಲಾಗುವ ಸೇತುವೆಗಳ ಅಡಿಯಲ್ಲಿ ಕನಿಷ್ಠ ಒಂದು ಮೀಟರ್ ನೀರು ಹಿಡಿದಿಡುವ ತಂತ್ರಜ್ಞಾನಕ್ಕೆ ಒತ್ತುಕೊಡಲಾಗುತ್ತದೆ.
ಪ್ರಮುಖ ರಸ್ತೆಗಳ ದುರಸ್ತಿ: 2019ರ ಪ್ರವಾಹದಿಂದ ಅಪಾರವಾಗಿ ಹಾನಿಗೊಳಗಾಗಿರುವುದು ರಾಜ್ಯದ ಹೆದ್ದಾರಿಗಳು. ಇದರೊಂದಿಗೆ ಶಾಲಾಕಟ್ಟಡ ಮತ್ತು ಖಾಸಗಿ ಮನೆ-ಜಮೀನುಗಳು ಕೊಚ್ಚಿಹೋಗಿವೆ. ಪ್ರವಾಹದಿಂದ ಕುಸಿದುಬಿದ್ದ ಹಾಗೂ ಹಾನಿಗೊಳಗಾದ 1828 ಕಾಮಗಾರಿಗಳನ್ನು ಸರ್ಕಾರ ಕೈಗೆತ್ತಿಕೊಂಡಿದೆ. ಕರ್ನಾಟಕದಲ್ಲಿ 76257 ಕಿ.ಮೀ. ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಗಳಿವೆ. ಇದರೊಂದಿಗೆ ಕಳೆದೊಂದು ವರ್ಷದಲ್ಲಿ 3900 ಕಿ.ಮೀ. ಉದ್ದದ ಹೆದ್ದಾರಿಗಳು ಅಭಿವೃದ್ಧಿಗೊಂಡಿವೆ.
ಲೋಕೋಪಯೋಗಿ ಇಲಾಖೆಯ ಮತ್ತೊಂದು ಪ್ರಮುಖ ಕಾರ್ಯಕ್ರಮವೆಂದರೆ-ಪ್ರವಾಹದಿಂದ ಹಾನಿಗೊಳಗಾಗಿದ್ದ 6143 ಶಾಲಾಕೊಠಡಿಗಳ ಪುನರ್ ನಿರ್ಮಾಣ (ನಬಾರ್ಡ್ ನೆರವಿನೊಂದಿಗೆ). ‘ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ 785 ಕಿ.ಮೀ. ರಸ್ತೆ ನಿರ್ವಣ, ಕೇಂದ್ರ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಯೋಜನೆಯಡಿ ಕರ್ನಾಟಕಕ್ಕೆ 4762 ಕೋಟಿ ರೂ. ಅನುದಾನ ದೊರೆತಿರುವುದು ಗಮನಾರ್ಹ. ಅಲ್ಲದೆ ಲೋಕೋಪಯೋಗಿ ಇಲಾಖೆ ರಾಜ್ಯ ಸರ್ಕಾರದ 36 ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಅವಶ್ಯವೆನಿಸಿದ ಹಲವಾರು ಯೋಜನೆಗಳನ್ನು ಈ ಅವಧಿಯಲ್ಲಿ ಕೈಗೆತ್ತಿಕೊಂಡಿದೆ.
ಕೋವಿಡ್ ವಿರುದ್ಧ ಹೋರಾಟ: ಕರೊನಾ ಹೆಮ್ಮಾರಿಯನ್ನು ಹಿಮ್ಮೆಟ್ಟಿಸಿ, ರಾಜ್ಯದ ಜನಾರೋಗ್ಯವನ್ನು ರಕ್ಷಿಸುವ ಕೆಲಸ ಈಗ ಆದ್ಯತೆ ಪಡೆದುಕೊಂಡಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅಹರ್ನಿಶಿ ಈ ಮಹಾತ್ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಆದೇಶಿಸುತ್ತಿರುವ ಕ್ರಮಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ವಿಶೇಷ ಗಮನ ನೀಡುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ- ಇಬ್ಬರೂ ನಾಯಕರು ಕರೊನಾ ಹೊಡೆದೊಡಿಸಲು ಜನಸಾಮಾನ್ಯರ ಸಹಕಾರ ಕೋರಿದ್ದಾರೆ. ಸಂಘಟಿತ ಪ್ರಯತ್ನದಿಂದ ದೇಶ ಶೀಘ್ರದಲ್ಲಿಯೇ ಕರೊನಾ ಆತಂಕದಿಂದ ಪಾರಾಗುವುದೆಂಬ ವಿಶ್ವಾಸ-ಭರವಸೆ ಸರ್ಕಾರಕ್ಕಿದೆ.
(ಲೇಖಕರು ರಾಜ್ಯದ ಉಪ ಮುಖ್ಯಮಂತ್ರಿ)