

ರಾಜ್ಯದಲ್ಲಿ ಸಿಸೇರಿಯನ್ ಹೆರಿಗೆಗಳ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿ ಏರಿಕೆಯಾಗುತ್ತಿರುವುದು ಕಳವಳಕಾರಿ ಬೆಳವಣಿಗೆ. ಸಹಜ ಹೆರಿಗೆಗಳ ಪ್ರಮಾಣ ಕಡಿಮೆಯಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಶೇಕಡ 36ರಷ್ಟು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಶೇ. 61ರಷ್ಟು ಹೆರಿಗೆಗಳು ಶಸ್ತ್ರಚಿಕಿತ್ಸೆ ಮೂಲಕವೇ ಆಗುತ್ತಿವೆ ಎಂಬುದನ್ನು ಸರ್ಕಾರವೇ ವಿಧಾನಸಭೆಯಲ್ಲಿ ಒಪ್ಪಿಕೊಂಡಿದೆ.
ಇದರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಹೆರಿಗೆಗಳಲ್ಲಿ ಸಿಸೇರಿಯನ್ ಅನಗತ್ಯವಾಗಿತ್ತು ಎಂಬುದು ಗುಟ್ಟೇನಲ್ಲ. ಹೆಚ್ಚಿನ ಹಣದಾಸೆಗೆ ಆಸ್ಪತ್ರೆಗಳು ಮತ್ತು ಕೆಲವು ಸಿಬ್ಬಂದಿ ಈ ರೀತಿ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಮಹಿಳೆಯರ ಆರೋಗ್ಯದ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ಎಲ್ಲರೂ ಗಮನ ಹರಿಸಬೇಕಿದೆ. ತುರ್ತು ಪರಿಸ್ಥಿತಿಯಲ್ಲಿ ಸಿಸೇರಿಯನ್ ನಿರ್ಧಾರ ಸರಿ. ಆದರೆ, ಹೆಚ್ಚಿನ ಖಾಸಗಿ ಆಸ್ಪತ್ರೆಗಳು ಅಗತ್ಯವಿಲ್ಲದಿದ್ದರೂ ಶಸ್ತ್ರಚಿಕಿತ್ಸೆ ನಡೆಸಿ ಹೆರಿಗೆ ಮಾಡಿಸುತ್ತಿವೆ, ಇದರಿಂದ ಹೆಚ್ಚು ಶುಲ್ಕ ವಸೂಲಿ ಮಾಡಬಹುದು ಎಂಬ ಕುತರ್ಕ ಅವುಗಳದ್ದು. ಆದರೆ, ಸಿಸೇರಿಯನ್ ಹೆರಿಗೆ ಅಲ್ಪ ಮತ್ತು ದೀರ್ಘಾವಧಿಯಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು.
ತಾಯಿ ಮತ್ತು ಮಗುವಿನ ರೋಗನಿರೋಧಕ ಶಕ್ತಿ ಕ್ರಮೇಣ ದುರ್ಬಲಗೊಳ್ಳುತ್ತದೆ. ಅಲ್ಲದೆ, ಮಗುವಿಗೆ ಅಲರ್ಜಿಗಳು ಮತ್ತು ಅಸ್ತಮಾದ ಅಪಾಯವನ್ನು ಹೆಚ್ಚಿಸುತ್ತದೆ. ಕೆಲ ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಲ್ಲದೆ, ಸಿಸೇರಿಯನ್ನಿಂದ ಚೇತರಿಸಿಕೊಳ್ಳಲು ಬಾಣಂತಿಗೆ ಕನಿಷ್ಠವೆಂದರೂ 15-20 ದಿನಗಳು ಬೇಕಾಗುತ್ತವೆ. ಅಲ್ಲದೆ, ರಕ್ತಸ್ರಾವ, ನೋವು, ಗಾಯದ ಸೋಂಕು, ಬೆನ್ನು ನೋವು ಸೇರಿದಂತೆ ಅನೇಕ ಸಮಸ್ಯೆಗಳು ಕಾಡುತ್ತವೆ. ‘ರಾಜ್ಯದಲ್ಲಿ ಅನಗತ್ಯ ಸಿಜೇರಿಯನ್ ಹೆರಿಗೆ ತಡೆಗಟ್ಟಲು ಮುಂದಿನ ತಿಂಗಳು ವಿಶೇಷ ಕಾರ್ಯಕ್ರಮ ಘೊಷಿಸಲಾಗುವುದು.
ಅಲ್ಲದೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ತಾಲ್ಲೂಕು ಮಟ್ಟದ ಆಸ್ಪತ್ರೆಗಳನ್ನು 247 ಪ್ರಸೂತಿ ಸೇವೆಗಳನ್ನು ನೀಡಲು ಬಲಪಡಿಸಲಾಗುತ್ತಿದೆ. ಅನಗತ್ಯ ಸಿಜೇರಿಯನ್ ಶಸ್ತ್ರಚಿಕಿತ್ಸೆ ತಡೆಯಲು ಪ್ರತಿ ತಿಂಗಳು ಜಿಲ್ಲಾ ಮಟ್ಟದಲ್ಲಿ ಪರಿಶೀಲನಾ ಸಭೆಗಳನ್ನು ನಡೆಸಲಾಗುತ್ತಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಸೋಮವಾರ ವಿಧಾನಸಭೆಗೆ ತಿಳಿಸಿದ್ದಾರೆ. ಆದರೆ, ಇದು ಭರವಸೆಗೆ ಸೀಮಿತವಾಗಿ ಉಳಿಯಬಾರದು. ಅನಗತ್ಯ ಸಿಸೇರಿಯನ್ ತಪ್ಪಿಸಲು ವೈದ್ಯಕೀಯ ಸಿಬ್ಬಂದಿಯಲ್ಲಿ ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಉದ್ದೇಶಪೂರ್ವಕವಾಗಿ ಸಿಸೇರಿಯನ್ ಮಾಡುವವರ ಮೇಲೆ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಕೊರತೆಯಾಗದಂತೆ ನಿಗಾ ವಹಿಸಬೇಕು.
ಹೆರಿಗೆ ಎಂಬುದು ಹೆಣ್ಣಿನ ಜೀವಮಾನದ ಮಹತ್ವದ ಘಟ್ಟ. ಅವರ ಕುಟುಂಬಕ್ಕೂ ಸಂತಸ-ಆತಂಕ ಒಟ್ಟೊಟ್ಟಿಗೆ ತರುವ ಗಳಿಗೆ. ಹಾಗಾಗಿ, ತಾಯಿ-ಮಗುವಿನ ಒಟ್ಟಾರೆ ಆರೋಗ್ಯವನ್ನು ಪರಿಗಣಿಸಿ, ಸಹಜ ಹೆರಿಗೆಗೆ ಆದ್ಯತೆ ನೀಡಬೇಕಿದೆ. ಈ ನಿಟ್ಟಿನಲ್ಲಿ ವೈದ್ಯರು, ಆರೋಗ್ಯ ತಜ್ಞರು ಗರ್ಭೀಣಿಯರಿಗೂ ಸೂಕ್ತ ತಿಳಿವಳಿಕೆ ನೀಡಬೇಕಿದೆ. ಒಟ್ಟಾರೆ, ಈ ಸಮಸ್ಯೆ ಮತ್ತಷ್ಟು ತೀವ್ರಗೊಳ್ಳುವ ಮುನ್ನವೇ ಪರಿಹಾರ ಕಂಡುಕೊಳ್ಳುವುದು ಅಗತ್ಯ.