

ಅಂಕಾರಾ: ನೀರಲ್ಲಿ ಸ್ನಾನ ಮಾಡೋದು ಓಕೆ. ಆದರೆ ಹಾಲಲ್ಲಿ ಸ್ನಾನ ಮಾಡೋದು? ಅದರಲ್ಲೂ ಲಕ್ಷಾಂತರ ಜನರಿಗೆ ಹಾಲು ತಲುಪಿಸುವ ಡೇರಿಯ ಹಾಲಿನಲ್ಲೇ ಸ್ನಾನ ಮಾಡಿಬಿಟ್ಟರೆ?
ಹೌದು! ಇಂತದ್ದೊಂದು ಘಟನೆ ನಿಜವಾಗಿಯೂ ನಡೆದಿದೆ. ಟರ್ಕಿಯ ಡೇರಿಯೊಂದರಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ ಈ ರೀತಿಯ ಕಿಡಿಗೇಡಿ ಕೆಲಸ ಮಾಡಿದ್ದಾನೆ. ಡೇರಿಯ ಹಾಲಿನಲ್ಲೇ ಸ್ನಾನ ಮಾಡಿದ್ದಷ್ಟೇ ಅಲ್ಲದೆ, ಅದರ ವಿಡಿಯೋವನ್ನು ಹರಿಬಿಟ್ಟು, ಅಲ್ಲಿನ ಜನರು ಹಾಲು ಕೊಳ್ಳುವುದಕ್ಕೂ ಹಿಂದೆ ಮುಂದೆ ಯೋಚಿಸುವ ಪರಿಸ್ಥಿತಿ ತಂದಿಟ್ಟಿದ್ದಾನೆ.
ಎಮ್ರೆ ಸಯಾರ್ ಹಾಲಿನಲ್ಲೇ ಸ್ನಾನ ಮಾಡಿರುವ ವ್ಯಕ್ತಿ. ಈತ ಮಧ್ಯ ಅನಾಟೋಲಿಯನ್ ಪ್ರಾಂತ್ಯದ ಕೊನ್ಯಾದಲ್ಲಿನ ಡೇರಿಯೊಂದರಲ್ಲಿ ಕಾಂಟ್ಯಾಕ್ಟ್ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ. ಕೆಲಸದ ವೇಳೆ ಉದ್ದಟತನ ತೋರಿರುವ ಈತ ಹಾಲಿನಲ್ಲೇ ಸ್ನಾನ ಮಾಡಿದ್ದಾನೆ. ಆ ವಿಡಿಯೋವನ್ನು ಟಿಕ್ಟಾಕ್ನಲ್ಲಿ ಹರಿಬಿಟ್ಟು ಸಾಕಷ್ಟು ಲೈಕ್ಸ್ ಗಿಟ್ಟಿಸಿಕೊಂಡಿದ್ದಾನೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಡೇರಿ ಎಚ್ಚೆತ್ತುಕೊಂಡಿದೆ. ತಕ್ಷಣ ಎಮ್ರೆಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಅದು ಹಾಲಲ್ಲ, ಡೇರಿಯ ಬಾಯ್ಲರ್ಗಳನ್ನು ತೊಳೆಯಲು ಬಳಸುವ ಲಿಕ್ವಿಡ್ ಎಂದು ಡೇರಿ ಸಮಜಾಯಿಷಿ ಕೊಟ್ಟಿದೆ. ಆದರೆ ಅದನ್ನು ಒಪ್ಪದ ಅಲ್ಲಿನ ಸರ್ಕಾರ ಈ ಪ್ರಕರಣದ ಬಗ್ಗೆ ತನಿಖೆ ನಡೆಸಲೆಂದು ವಿಶೇಷ ತನಿಖಾ ತಂಡವನ್ನು ರಚಿಸಿದೆ. ಸದ್ಯಕ್ಕೆ ಡೇರಿಯನ್ನು ಮುಚ್ಚಲಾಗಿದ್ದು, ಅದಕ್ಕೆ ತಕ್ಕ ದಂಡವನ್ನೂ ವಿಧಿಸಿರುವುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. (ಏಜೆನ್ಸೀಸ್)